ಶಿವಮೊಗ್ಗ/ದಾವಣಗೆರೆ: ದಾವಣಗೆರೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಬಳಿ ಭೀಕರ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ನಂಜುಂಡಪ್ಪ (83), ರಾಕೇಶ್ (27), ದೇವರಾಜ್ (30) ಎಂದು ಗುರುತಿಸಲಾಗಿದೆ. ಈ ಮೂವರು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದವರು ಎಂದು ತಿಳಿದು ಬಂದಿದೆ.
ಕೆಎಸ್‌ಆರ್‌ಟಿಸಿ ಬಸ್ ಶಿಕಾರಿಪುರದ ಕಡೆಯಿಂದ ಬರುತ್ತಿತ್ತು. ಶಿವಮೊಗ್ಗದ ಕಡೆಯಿಂದ ಹೊರಟಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಬಸ್-ಕಾರು ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಕಾರು ಗುರುತು ಸಿಗದಂತೆ ಅಪ್ಪಚ್ಚಿ ಆಗಿತ್ತು. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ ಮೂವರು ಚೆಲ್ಲಾಪಿಲ್ಲಿಯಾಗಿದ್ದರು. ಇನ್ನೂ ಬಸ್ಸಿನ ಮುಂಭಾಗವು ಛಿದ್ರಗೊಂಡಿತ್ತು.
ಘಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಣ್ಣ ಪುಟ್ಟ ಗಾಯಗೊಂಡವರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನ್ಯಾಮತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನ್ಯಾಮತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.