ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಿದ್ರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸೇರಿದಂತೆ ಹಲವು ಬಿಜೆಪಿಯ ನಾಯಕರು ಹಾಜರಾಗಿದ್ದರು. ಆದರೆ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮಾತ್ರ ಕಾರ್ಯಕ್ರಮದತ್ತ ಸುಳಿಯಲೇ ಇಲ್ಲ.
ತನಗೆ ಮೋದಿಯೇ ದೇವರು ಎಂದಿರುವ ಈಶ್ವರಪ್ಪ, ಆ ದೇವರು ತನ್ನ ಊರಿಗೇ ಬಂದರೂ ದರ್ಶನ ಪಡೆಯಲಿಲ್ಲ. ಈ ಮೂಲಕ ತಮ್ಮ ಸಿಟ್ಟನ್ನು ಮುಂದುವರೆಸಿದ್ದಾರೆ. ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದಾರೆ. ಈಶ್ವರಪ್ಪ ಮೋದಿ ಕಾರ್ಯಕ್ರಮಕ್ಕೆ ಬರ್ತಾರೆ ಎಂದು ನಂಬಿದ್ದ ಮುಖಂಡರ ನಿರೀಕ್ಷೆ ಹುಸಿಯಾಗಿದೆ. ಶಿವಮೊಗ್ಗ ಚುನಾವಣೆಗೆ ಇನ್ನೂ 40 ದಿನ ಇದೆ ಅಷ್ಟರಲ್ಲಿ ಎಲ್ಲಾ ಸರಿ ಹೋಗುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು. ಆದರೆ ಈ ಬಾರಿ ಈಶ್ವರಪ್ಪನವರ ಕೋಪ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
ಯಾಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿವೃತ್ತಿಗೆ ಸೂಚಿಸಿದಾಗ ಮರು ಮಾತನಾಡದೇ ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದರು. ಆ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈಶ್ವರಪ್ಪನವರಿಗೆ ಕರೆ ಮಾಡಿ ಪಕ್ಷ ನಿಮ್ಮ ತ್ಯಾಗವನ್ನು ಸ್ಮರಿಸುತ್ತದೆ, ನಿಮ್ಮ ಶಿಸ್ತಿನ ನಡೆ ಶ್ಲಾಘನೀಯ ಎಂದೆಲ್ಲ ಹೊಗಳಿದ್ದರು. ಮೋದಿ ಮಾತುಗಳಿಂದಲೇ ಅಂದು ಬೆಳಗ್ಗೆ ಈಶ್ವರಪ್ಪ ಬ್ರೇಕ್ ಫಾಸ್ಟ್ ಮಾಡದೆ ಹೊಟ್ಟೆ ತುಂಬಿಸಿಕೊಂಡಿದ್ರು.
ಮುಂದೆ ತಮಗೆ,ತಮ್ಮ ಪುತ್ರನಿಗೆ ಭರ್ಜರಿ ಬಾಡೂಟ ಇದೆ ಎಂದು ಭಾವಿಸಿದ್ರು. ಆದರೆ ಈಗ ಪುತ್ರನಿಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಈಶ್ವರಪ್ಪ ಬುಸುಗುಡಲು ಶುರುಮಾಡಿದ್ದಾರೆ. ಇದೀಗ ಕೆರಳಿರುವ ಈಶ್ವರಪ್ಪರನ್ನು ಯಾರಾದರೂ ಸಮಾಧಾನ ಮಾಡುತ್ತಾರೋ ಅಥವಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಜ್ವಾಲಾಗ್ನಿಗೆ ಬಿಜೆಪಿ ಬಲಿಯಾಗುತ್ತೋ ಅನ್ನೋದನ್ನ ಕಾದುನೋಡಬೇಕಿದೆ.