ಮಡಿಕೇರಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದರಲ್ಲಿ ಚಾಲಕರೊಬ್ಬರು ಸೋರುತ್ತಿರುವ ಮಳೆ ನೀರಿನಿಂದ ರಕ್ಷಣೆ ಪಡೆಯಲು ಛತ್ರಿ ಹಿಡಿದುಕೊಂಡೇ ಚಾಲನೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಮಡಿಕೇರಿ, ಕೊಡಗು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಈ ಮಾರ್ಗದಲ್ಲಿ ಬಸ್ ಚಲಾಯಿಸುವುದೇ ಚಾಲಕರಿಗೆ ಸವಾಲಾಗಿದೆ. ಇಂತಹ ಹೊತ್ತಿನಲ್ಲಿ ಬಸ್ ಛಾವಣಿ ಕೂಡ ಸೋರುತ್ತಿದ್ದು, ಚಾಲಕರೊಬ್ಬರು ಛತ್ರಿ ಹಿಡಿದುಕೊಂಡೇ ಬಸ್ ಚಲಾಯಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.
ವಾಯವ್ಯ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೋರುತ್ತಿರುವ ಮಳೆನೀರಿನಿಂದ ರಕ್ಷಣೆ ಪಡೆಯಲು ಚಾಲಕರೊಬ್ಬರು ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಲಾಯಿಸಿದ್ದಾರೆ.
ಈ ವೈರಲ್ ವಿಡಿಯೋ ಸಾರಿಗೆ ಸಂಸ್ಥೆಯಲ್ಲಿನ ಬಸ್ಗಳ ಅವ್ಯವಸ್ಥೆಯನ್ನು ಎತ್ತಿ ತೋರಿಸಿದ್ದು, ಸಾರಿಗೆ ಇಲಾಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ”ಚಾಲಕ ಕೈಯಲ್ಲಿ ಕೊಡೆ ಹಿಡಿದುಕೊಂಡು ಅಪಾಯಕಾರಿ ಚಾಲನೆ ಮಾಡಿದ್ದಾರೆ. ಮಳೆ ನೀರು ಸೋರಿದ ಕಾರಣ ಅವರು ಹೀಗೆ ಮಾಡಬೇಕಾಗಿ ಬಂದಿದೆ. ಇಲಾಖೆ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಮೊದಲು ಸರಿಯಾದ ಬಸ್ ವ್ಯವಸ್ಥೆ ಮಾಡಿ” ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.