ಹೈದರಾಬಾದ್ : ತನ್ನ ಚಿನ್ನದ ಆಭರಣ ವಾಪಾಸ್ ಕೇಳಿದ 84 ವರ್ಷದ ವೃದ್ದೆಯನ್ನು ಪಕ್ಕದ ಮನೆಯ ವ್ಯಕ್ತಿ ಹತ್ಯಗೈದಿದ್ದಲ್ಲದೆ, ಮೃತದೇಹವನ್ನ ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ ಭೀಕರ ಘಟನೆ ಆಂಧ್ರಪ್ರದೇಶದ ಬಸವನದಲ್ಲಿ ನಡೆದಿದೆ.
ತನ್ನ ನೆರೆಹೊರೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಕಾರ್ಯಕ್ರಮಗಳಿದ್ದ ಕಾರಣಕ್ಕಾಗಿ ಓಬುಳಮ್ಮ ಎಂಬ ಮಹಿಳೆ 15 ದಿನಗಳ ಹಿಂದೆ 7 ತೊಲ ಚಿನ್ನಅಭರಣವನ್ನು ಸಾಲವಾಗಿ ನೀಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಓಬುಳಮ್ಮ, ಕೃಷ್ಣಮೂರ್ತಿಯ ಬಳಿ ಕೊಟ್ಟ ಚಿನ್ನವನ್ನು ವಾಪಾಸ್ ಕೇಳಿದ್ದಾರೆ. ಆದರೆ, ಕೃಷ್ಣಮೂರ್ತಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ದರಿಂದ ಓಬಳಮ್ಮ ಗ್ರಾಮದ ಹಿರಿಯರಿಗೆ ಈವಿಚಾರ ತಿಳಿಸಿದ್ದಳು. ಈ ಹಂತದಲ್ಲಿ ಊರ ಹಿರಿಯರು ಆತನಿಗೆ ಬೈದು, ಚಿನ್ನ ವಾಪಾಸ್ ನೀಡುವಂತೆ ಸೂಚಿಸಿದ್ದರು.
ಇದರಿಂದ ಕೋಪಗೊಂಡಿದ್ದ ಕೃಷ್ಣಮೂರ್ತಿ ಹಾಗೂ ಆತನ ಕುಟುಂಬ ಅಜ್ಜಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಕಾಯುತಿತ್ತು. ಕಳೆದ ಶುಕ್ರವಾರ ಅಜ್ಜಿ ಹಾಗೂ ಕೃಷ್ಣಮೂರ್ತಿ ನಡುವೆ ಇದೇ ವಿಚಾರವಾಗಿ ಜಗಳ ನಡೆದಿದೆ. ಇದರ ಬೆನ್ನಲ್ಲಿಯೇ ಕೊಡಲಿಯಿಂದ ಹೊಡೆದು ಅಜ್ಜಿಯ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಕೊಡಲಿಯಿಂದಲೇ ತುಂಡು ತುಂಡಾಗಿ ಕತ್ತರಿಸಿ ಪಕ್ಕದಲ್ಲೇ ಇದ್ದ ಪೆನಕಚೇರ್ಲಾ ಅಣೆಕಟ್ಟಿಗೆ ಎಸೆದಿದ್ದಾನೆ.
ಮಹಿಳೆಯ ಮನೆಯವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಜ್ಜಿ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಕುಟುಂಬದ ಸದಸ್ಯರು ಹೈದರಾಬಾದ್ನಲ್ಲಿ ವಾಸಿಸುತ್ತಿದ್ದರು.