ಹುಬ್ಬಳ್ಳಿ: ಮೋದಿ ಮೋದಿ ಎಂದು ಹೇಳುವ ವಿದ್ಯಾರ್ಥಿಗಳ ಕಪ್ಪಾಳಕ್ಕೆ ಹೊಡೆಯಿರಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತದಾನ ಮಾಡುವ ಮೂಲಕ ಕಪ್ಪಾಳ ಮೋಕ್ಷ ಮಾಡುತ್ತಾರೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಕೆಲವೇ ಸ್ವಲ್ಪ ದಿನ ಕಾಯಿರಿ, ಬಿಜೆಪಿಗೆ ಮತ ನೀಡುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಕಪಾಳಕ್ಕೆ ಹೊಡಿತಾರೆ ಎಂದರು. ಹಾವೇರಿ ಕ್ಷೇತ್ರಕ್ಕೆ ಸ್ವತಃ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಚಾರಕ್ಕೆ ಬರುತ್ತಾರೆ. ರಾಷ್ಟ್ರೀಯ ನಾಯಕರು ಹಾಗೂ ಸೆಲೆಬ್ರೆಟಿಗಳು ಕೂಡಾ ಪ್ರಚಾರಕ್ಕೆ ಬರುತ್ತಾರೆ. ಇನ್ನು ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಟೂರ್ ಫಿಕ್ಸ್ ಆಗತ್ತೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಕಾಣುತ್ತಿದೆ. ಎಲ್ಲ ಕಡೆ ಮೋದಿ ಪರ ಅಲೆ ಇದೆ. ಹೀಗಾಗಿ ರಾಜ್ಯದಲ್ಲಿ ಭಿನ್ನಮತ ಶಮನ ಆಗುತ್ತದೆ. ಈಗಾಗಲೇ ಸಂಗಣ್ಣ ಕರಡಿ ಅವರು ಸಮಾಧಾನ ಆಗಿರೋದು ಮಾತ್ರವಲ್ಲ ನಮ್ಮ ಕ್ಷೇತ್ರದ ಪ್ರಚಾರಕ್ಕೂ ಬರುತ್ತಾರೆ ಎಂದರು. ಜನಾರ್ಧನ ರೆಡ್ಡಿ ಪಕ್ಷಕ್ಕೆ ಬಂದಿರೋದು ಬಲ ಬಂದಂತಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ ಎಂದರು. ಬಿಜೆಪಿಗೆ ಬಂದ್ರೆ ಎಲ್ಲರೂ ಶುದ್ಧವಾಗ್ತಾರೆ ಎಂಬ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಯಿ ಅದು ಅವರ ಅನುಭವದ ಮಾತು ಎಂದು ಹೇಳುವ ಮೂಲಕ ಲಾಡ್ ಹೇಳಿಕೆಗೆ ತಿರುಗೇಟು ನೀಡಿದರು.
ಈ ವೇಳೆ ಮಾತನಾಡಿದ ಬೊಮ್ಮಾಯಿ ಪ್ರಸ್ತುತ ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಗೆ ಹೋಗಿರೋದು ಕೇವಲ ರಾಜಕೀಯ ತಂತ್ರಗಾರಿಕೆ. ಈ ಹಿಂದೆ ಯುಪಿಐ ಕಾಲದಲ್ಲಿ ಎಷ್ಟು ಹಣ ಬಂದಿದೆ. ಎನ್ ‘ಡಿಎ ಕಾಲದಲ್ಲಿ ಎಷ್ಟು ಎನ್ ಡಿಆರ್’ಎಫ್ ಹಣ ಬಂದಿದೆ ಅನ್ನೋದು ಬಹಿರಂಗ ಪಡಿಸಲಿ ಎಂದು ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಸವಾಲ್ ಹಾಕಿದ್ರು