ಹುಬ್ಬಳ್ಳಿ : ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಬೋಗಸ್ ಗ್ಯಾರೆಂಟಿಗಳು ಬಂದ್ ಆಗಲಿವೆ ಎಂದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಭವಿಷ್ಯ ನುಡಿದರು.
ಧಾರವಾಡ ಲೋಕಸಭಾ ವ್ಯಾಪ್ತಿಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ ಅವರು, ಗ್ಯಾರೆಂಟಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ. ಸರ್ಕಾರದ ಖಜಾನೆ ಈಗ ಖಾಲಿಯಾಗಿದೆ. ಹಾಗಾಗಿ ಬರುವ ದಿನಗಳಲ್ಲಿ ಚುನಾವಣೆ ನಂತರ ಗ್ಯಾರಂಟಿಗಳು ಬಂದ್ ಆಗುತ್ತವೆ. ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಈಗ 5 ಕೆಜಿಯನ್ನೂ ಕೊಡಲಾಗುತ್ತಿಲ್ಲ. ಬರೀ ಬೋಗಸ್ ಹೇಳುತ್ತಿದ್ದಾರೆ ಎಂದರು.
ಇವರ ಹಾಗೇ ಸುಳ್ಳು ಹೇಳುವಂಥ ಸರ್ಕಾರ ನಮ್ಮದಲ್ಲ. ದೇಶದ ಸುರಕ್ಷತೆ ಮತ್ತು ದೇಶದಲ್ಲಿ ಬಡತನ ನಿರ್ಮೂಲನೆಗೆ ಹಲವಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನುಷ್ಠಾನಕ್ಕೆ ತಂದು ದೇಶವನ್ನು ಪರಿವರ್ತನೆಗೊಳಿಸಿದ್ದಾರೆ. ಎರ್ ಸ್ಟ್ರೈಕ್ ಮೂಲಕ ಭಾರತದ ತಾಕತ್ತು ತೋರಿಸಿದ್ದಾರೆ ಮೋದಿ, ಏರ್ ಸ್ಟ್ರೈಕ್ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ತಾಕತ್ತು ಏನೆಂಬುದನ್ನು ವಿಶ್ವಕ್ಕೇ ತೋರಿಸಿದ್ದಾರೆ ಎಂದು ಹೇಳಿದರು.
ಏರ್ ಫೋರ್ಸ್ ಅಧಿಕಾರಿ ಅಭಿನಂದನ್ ಪಾಕ್ ಸೇನೆಗೆ ಸಿಕ್ಕಿಬಿದ್ದರು. ಇದು ಕಾಂಗ್ರೆಸ್ಗೆ ಖುಷಿ ಕೊಟ್ಟಿತ್ತು. ಆದರೆ, ಪ್ರಧಾನಿ ಮೋದಿ ದಿಟ್ಟ ನಿಲುವು ತೆಗೆದುಕೊಂಡು ಅಭಿನಂದನ್ ಒಂದು ಕೂದಲು ಊನ ಆದರೂ ಪಾಕಿಸ್ತಾನವನ್ನು ಭೂಪಟದಿಂದಲೇ ಕಿತ್ತೆಸೆಯುತ್ತೇವೆ ಎಂಬ ಸಂದೇಶ ರವಾನಿಸಿದರು. ಪರಿಣಾಮ ಅಭಿನಂದನ್ ಭಾರತಕ್ಕೆ ಸುರಕ್ಷಿತವಾಗಿ ಮರಳಿದರು. ಇದಾಗಿತ್ತು ಭಾರತದ ಮತ್ತು ಪ್ರಧಾನಿ ಮೋದಿ ಅವರ ನಿಜವಾದ ತಾಕತ್ತು ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.