ತುಮಕೂರು : ಪ್ರಜ್ವಲ್ ರೇವಣ್ಣ ಅವರೇ ಶರಣಾಗುತ್ತೇನೆ ಅಂತಾ ಹೇಳಿದ್ದಾರೆ ಹಾಗಾಗಿ ಅರೆಸ್ಟ್ ಅಂತೂ ಆಗುತ್ತಾರೆ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಜ್ವಲ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಬ್ಲೂ ಕಾರ್ನರ್ ನೋಟಿಸ್, ವಾರಂಟ್ ಜಾರಿ ಹಿನ್ನೆಲೆ ಅರೆಸ್ಟ್ ಮಾಡಬೇಕು. ಎಸ್ಐಟಿಯವರು ಯಾವ ರೀತಿ ಕ್ರಮ ತೆಗೆದುಕೊಳ್ಳತ್ತಾರೆಂದು ನೋಡಬೇಕು ಎಂದು ಹೇಳಿದ್ದಾರೆ
ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಮೇ 31ರಂದು ಬೆಳಗ್ಗೆ 10ಕ್ಕೆ ಎಸ್‌ಐಟಿ ತನಿಖೆಗೆ ಸಹಕರಿಸುತ್ತೇನೆಂದು ಹೇಳಿದ್ದಾರೆ, ಇದನ್ನು ಸ್ವಾಗತಿಸುವೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೇ ಮಾತನಾಡುವ ವೇಳೆ ವಾಪಸ್ ಕರೆತರಲು ಪ್ರಯತ್ನಿಸಿದ್ದೆವು.
ಪ್ರಧಾನಿಗೆ ಸಿಎಂ 2 ಸಲ ಪತ್ರ ಬರೆದಿದ್ದರು, ಸಿಬಿಐಗೆ ಮನವಿ ಮಾಡಿದ್ದೆವು. ಇಂಟರ್‌ಪೋಲ್‌ಗೂ ಮನವಿ ಮಾಡಿದ್ದು, ಬ್ಲೂಕಾರ್ನರ್ ನೋಟಿಸ್ ಸಹ ನೀಡಿದ್ದರು. ಪಾಸ್‌ಪೋರ್ಟ್ ರದ್ದು ಮಾಡಿ ಅಂತಾ ಕೇಂದ್ರಕ್ಕೂ ಮನವಿ ಮಾಡಿದ್ದೆವು. ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ ಆರಂಭಿಸಿದ್ದೇವೆ ಅಂತಾ ಕೇಂದ್ರ ಹೇಳಿತ್ತು. ಈ ಮಧ್ಯೆ ಪ್ರಜ್ವಲ್ ಬರುತ್ತೇವೆ ಅಂತಾ ಹೇಳಿದ್ದನ್ನು ಸ್ವಾಗತ ಮಾಡುತ್ತೇನೆ. ತಮ್ಮ ಬಳಿಯಿರುವ ಸಾಕ್ಷ್ಯ, ಮಾಹಿತಿ ಆಧರಿಸಿ SIT ತನಿಖೆ ಮುಂದುವರಿಸುತ್ತೆ ಎಂದರು.
ಪ್ರಜ್ವಲ್ ರೇವಣ್ಣ ನನ್ನದೇನು ತಪ್ಪಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಎಲ್ಲರು ಹಂಗೆ ಹೇಳ್ತಾರೆ, ನಮ್ಮದು ತಪ್ಪಿಲ್ಲ ಅಂತ. ತಪ್ಪಿಲ್ಲ ಅಂದರೆ ಮಾಡಿದೋರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತೆ. ಎಸ್‌ಐಟಿ ಅವರು ಎಲ್ಲಾ ಮಾಹಿತಿ ಕಲೆಹಾಕಿ ಅದರ ಆಧಾರದ ಮೇಲೆ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ ಅಂತ ಹೇಳ್ತಾರೆ. ಒಂದು ವೇಳೆ 31 ಕ್ಕೂ ಬಂದಿಲ್ಲ ಅಂದರೆ ಮುಂದೆ ಏನಾಗುತ್ತೆ ನೋಡೋಣ. ಇನ್ನು ಮೂರು ನಾಲ್ಕು ದಿನ ಇರೋದು ಅಷ್ಟೇ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ರೂ ಶಿಕ್ಷೆಯಾಗಲಿ. ಪೆನ್ಡ್ರೈವ್ ಹಂಚಿದವರ ತಪ್ಪು ಇಲ್ಲ ಅಂತಾ ಸಿಎಂ ಹೇಳಿದ್ದಾರೆ. ಪೆನ್ಡ್ರೈವ್ ಹಂಚಿದವರ ರಕ್ಷಣೆಗೆ ಇದ್ದೇವೆಂದು ಹೇಳಿದಂತಾಗಿದೆ. ನೊಂದವರಿಗೆ ಸರ್ಕಾರ ಏನು ಸಾಂತ್ವನ ಹೇಳ್ತಿದೆ. ಒಂದು ಚುನಾವಣೆ ಗೆಲ್ಲಲು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಸಚಿವರು, ಅಧಿಕಾರಿಗಳೇ ನಿಮಗೂ ಅಕ್ಕ, ತಂಗಿ, ತಾಯಿ ಇಲ್ವಾ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಜ್ವಲ್ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಸರ್ಕಾರ ಸಿಕ್ಕಿ ಹಾಕಿಕೊಳ್ಳುತ್ತದೆ. ಪೆನ್ಡ್ರೈವ್ ಹಂಚಿದವರು ಸಿಕ್ಕಿ ಬೀಳ್ತಾರೆ, ಅದಕ್ಕೆ ಸಿಬಿಐಗೆ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.