ನವದೆಹಲಿ : ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದೋ, ಮನಸಾರೆ ಇಷ್ಟಪಟ್ಟವಳು ಇನ್ನೊಬ್ಬನ ಪಕ್ಕದಲ್ಲಿ ಹಸೆಮಣೆ ಮೇಲೆ ಕೂತುಕೊಳ್ಳುತ್ತಾಳೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಆಗದೆ ಯುವಕರು ಆತ್ಮಹತ್ಯೆಗೆ ಶರಣಾಗುತ್ತಾರೆ. ಬ್ರೇಕಪ್‌ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ. ಆದರೆ, ಬ್ರೇಕಪ್‌ ಬಳಿಕ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಯುವತಿ ಅಥವಾ ಪ್ರಿಯತಮೆಯು ಹೊಣೆ ಅಲ್ಲ ಎಂದು ದೆಹಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

“ಲವ್‌ ಫೇಲ್ಯೂರ್‌ ಆಯಿತು ಎಂದು ಲವ್ವರ್‌ ಆತ್ಮಹತ್ಯೆ ಮಾಡಿಕೊಂಡರೆ ಮಹಿಳೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ವಿದ್ಯಾರ್ಥಿಯು ನೇಣಿಗೆ ಕೊರಳೊಡ್ಡಿದರೆ ಮೌಲ್ಯಮಾಪಕ, ಕೇಸ್‌ ವಜಾ ಆಯಿತು ಎಂದು ಕ್ಲೈಂಟ್‌ ಆತ್ಮಹತ್ಯೆಗೆ ಶರಣಾದರೆ ವಕೀಲ ಹೊಣೆಯಾಗುವುದಿಲ್ಲ. ದುರ್ಬಲ ಮನಸ್ಥಿತಿಯ ವ್ಯಕ್ತಿಯು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳಿಗೆ ಕೈ ಹಾಕಿದರೆ, ಇನ್ನೊಬ್ಬ ವ್ಯಕ್ತಿಯು ಹೊಣೆಯಾಗಲು ಸಾಧ್ಯವಾಗುವುದಿಲ್ಲ ” ಎಂಬುದಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಇಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಮೂರ್ತಿ ಅಮಿತ್‌ ಮಹಾಜನ್‌ ಅವರು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಯುವಕನೊಬ್ಬ 2023ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಆತನ ಪ್ರೇಯಸಿಯೇ ಕಾರಣ. ಯುವತಿಯ ಮತ್ತೊಬ್ಬ ಗೆಳೆಯನು ಕೂಡ ನನ್ನ ಮಗನ ಆತ್ಮಹತ್ಯೆಗೆ ಜವಾಬ್ದಾರರು ಎಂಬುದಾಗಿ ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆಯು ಪ್ರಕರಣ ದಾಖಲಿಸಿದ್ದರು. ಇದರಿಂದಾಗಿ ಯುವತಿ ಹಾಗೂ ಆಕೆಯ ಗೆಳೆಯ ಬಂಧನದ ಭೀತಿಯಲ್ಲಿದ್ದರು. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈಗ ನ್ಯಾಯಾಲಯವು ಇಬ್ಬರಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

“ನನ್ನ ಮಗ ಹಾಗೂ ಯುವತಿಯು ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ದೈಹಿಕ ಸಂಬಂಧವೂ ಇತ್ತು. ಆದರೆ, ಬ್ರೇಕಪ್‌ ಬಳಿಕ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗ ಬರೆದ ಡೆತ್‌ನೋಟ್‌ನಲ್ಲಿ ಯುವತಿ ಹಾಗೂ ಆಕೆಯ ಗೆಳೆಯನ ಹೆಸರಿದೆ. ಇವರಿಬ್ಬರಿಂದಾಗಿಯೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂಬುದಾಗಿ ಯುವಕನ ತಂದೆಯು ದೂರಿನಲ್ಲಿ ಪ್ರಸ್ತಾಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯವು “ಡೆತ್‌ನೋಟ್‌ನಲ್ಲಿ ಇಬ್ಬರ ಹೆಸರಿದೆ ನಿಜ. ಆದರೆ, ಅವರಿಬ್ಬರೂ ಪ್ರಚೋದನೆ ನೀಡಿದ, ಬೆದರಿಕೆ ಹಾಕಿದ ಕುರಿತು ಪ್ರಸ್ತಾಪವಿಲ್ಲ. ದುರ್ಬಲ ಮನಸ್ಥಿತಿಯವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ” ಎಂದು ಕೋರ್ಟ್​  ಸ್ಪಷ್ಟಪಡಿಸಿತು.

ಆತ್ಮಹತ್ಯೆ ಮಹಾಪಾಪ. ಇಂಥ ಯೋಚನೆ ಬಂದರೆ ಆರೋಗ್ಯ ಸಹಾಯವಾಣಿ ಫೋನ್ ನಂಬರ್ 104 ಗೆ ಕರೆ ಮಾಡಿ

By Veeresh

Leave a Reply

Your email address will not be published. Required fields are marked *

Verified by MonsterInsights
Did you find this content engaging?