ಮೈಸೂರು : ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ವಂಚನೆ ಮಾಡಿರುವ ಆರೋಪ ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ಕೇಳಿ ಬಂದಿದೆ. 25 ವರ್ಷದ ಯುವಕ 34 ವರ್ಷದ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ. ಮಹಿಳೆ ಗರ್ಭಿಣಿಯಾಗಿದ್ದು ಯುವಕ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ 2018ರಲ್ಲಿ ಪತಿಯಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದಳು. ಸಿಂಗಿಂಗ್ ಇವೆಂಟ್ಗೆ ಹಾಡು ಹೇಳಲು ಹೋಗ್ತಿದ್ದಾಗ ಕೊಳ್ಳೆಗಾಲದ ತೇರಂಬಳ್ಳಿ ಗ್ರಾಮದ ಹರೀಶ್ ಎಂಬಾತನ ಪರಿಚಯವಾಗುತ್ತೆ. ಈ ಪರಿಚಯ ಪರಸ್ಪರಲ್ಲಿ ಉತ್ತಮ ಸ್ನೇಹಕ್ಕೆ ತಿರುಗತ್ತೆ. ಹರೀಶ್ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆ ಹಾಗೂ ಹರೀಶ್ ಇಬ್ಬರೂ ಹವ್ಯಾಸಿ ಹಾಡುಗಾರರಾಗಿದ್ದ ಕಾರಣ ಆಗಾಗ ಭೇಟಿಯಾಗುತ್ತಿದ್ದರು.
ಟೀಚರಮ್ಮನ ಮನೆಗೆ ಹರೀಶ್ ಆಗಾಗ ಬಂದು ಹೋಗುತ್ತಿದ್ದ. ಒಮ್ಮೆ ನನಗೆ ಮದ್ಯ ಕುಡಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಮಹಿಳೆ ಗರ್ಭಿಣಿಯಾಗಿದ್ದು ಆರೋಪಿ ಹರೀಶ್ ಪರಾರಿಯಾಗಿದ್ದಾನೆ. ಅಲ್ಲದೆ ಆರೋಪಿ ಹರೀಶ್ ಸಂಬಂಧಿ ಕೊಳ್ಳೇಗಾಲದಲ್ಲಿ ಸ್ಟಾಫ್ ನರ್ಸ್ ಆಗಿದ್ದಾನೆ. ಅವನ ಸಹಾಯದಿಂದ ಗರ್ಭಪಾತದ ಮಾತ್ರೆಗಳನ್ನು ತರಸಿ ನನಗೆ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಇನ್ನು ಆರೋಪಿ ಹರೀಶನ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸರಸ್ವತಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.