ಲಕ್ನೋ: ಮೊಸಳೆ-ಈ ಹೆಸರು ಕೇಳಿದರೆ ಸಾಕು ದೈತ್ಯ ದೇಹ, ಚೂಪಾದ ಹಲ್ಲು, ಸದಾ ಬೇಟೆಯಾಡಲು ಹೊಂಚು ಹಾಕುತ್ತಿರುವ ದೃಶ್ಯವೇ ಕಣ್ಣ ಮುಂದೆ ಬರುತ್ತದೆ. ಮೃಗಾಲಯದಲ್ಲಿ ದೂರದಿಂದ ಮೊಸಳೆಯನ್ನು ನೋಡಿ ಅದರ ಅಗಾಧ ಶಕ್ತಿಗೆ ಬೆರಗಾಗುತ್ತೇವೆ. ಅದು ಬಿಟ್ಟು ಕೋಟಿ ರೂ. ಕೊಡುತ್ತೇವೆ ಎಂದರೆ ಯಾರೂ ಮೊಸಳೆ ಸಮೀಪಕ್ಕೆ ಸುಳಿಯುವ ದುಸ್ಸಾಹಸ ಮಾಡುವುದಿಲ್ಲ. ಹೀಗಿರುವಾಗ ನಗರದ ಮಧ್ಯೆ ದೈತ್ಯ ದೇಹಿ ಮೊಸಳೆ ಕಂಡು ಬಂದರೆ ಏನಾಗಬೇಡ? ಹೌದು, ಇಂತಹದ್ದೊಂದು ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಲುವೆಯ ಗೇಟ್ ದಾಟಿ ಜನ ನಿಬಿಡ ಪ್ರದೇಶಕ್ಕೆ ಬಂದಿದ್ದ ಸುಮಾರು 10 ಅಡಿ ಉದ್ದದ ಮೊಸಳೆ ಮರಳಿ ನೀರಿನತ್ತ ತೆರಳಲು ಪ್ರಯತ್ನಪಡುವ ದೃಶ್ಯ ನೋಡಿ ನೆಟ್ಟಿಗರು ರೋಮಾಂಚನಗೊಂಡಿದ್ದಾರೆ.
ಉತ್ತರ ಪ್ರದೇಶದ ಬುಲಂದ್ಶಹರ್ನ ನರೋರಾ ಘಾಟ್ ಬಳಿ ಈ ಘಟನೆ ನಡೆದಿದೆ. ಗಂಗಾ ಕಾಲುವೆಯಿಂದ ಆಕಸ್ಮಿಕವಾಗಿ ಹೊರಗೆ ಬಂದ ಈ ಬೃಹತ್ ಗಾತ್ರದ ಮೊಸಳೆ ನರೋರಾ ಬ್ಯಾರೇಜ್ ಕೆಳಗಿನ ಗಂಗಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅದು ನರೋರಾ ಘಾಟ್‌ನ ನರೋರಾ ಬ್ಯಾರೇಜ್. ಕಾಲುವೆ ಸುತ್ತಲೂ ಕಬ್ಬಿಣದ ಸರಳುಗಳ ಗೇಟ್ ಅಳವಡಿಸಲಾಗಿದೆ. ಹೇಗೋ ಗೇಟ್ ದಾಟಿ ಈಚೆ ಬಂದ ಮೊಸಳೆಯೊಂದು ಸಿಮೆಂಟ್ ನೆಲದ ಮೇಲೆ ಒದ್ದಾಡುತ್ತಿರುವುದನ್ನು ತೋರಿಸುವ ಮೂಲಕ ದೃಶ್ಯ ಆರಂಭವಾಗುತ್ತದೆ. ನೀರಿಗೆ ಹೋಗಲು ಆ ಗೇಟ್ ದಾಟಲು ಮೊಸಳೆ ಪ್ರಯತ್ನಿಸುತ್ತದೆ. ಸರಳು ಹತ್ತಿ ಇನ್ನೇನು ಆಚೆ ಜಿಗಿಯಬೇಕು ಎನ್ನುವಷ್ಟರಲ್ಲಿ ನಿಯಂತ್ರಣ ತಪ್ಪಿ ದೈತ್ಯ ದೇಹದೊಂದಿಗೆ ದೊಪ್ಪೆಂದು ಸಿಮೆಂಟ್ ನೆಲಕ್ಕೆ ಬೀಳುತ್ತದೆ. ಮತ್ತೂ ಕೂಡ ಅದು ತನ್ನ ಪ್ರಯತ್ನವನ್ನು ಬಿಡುವುದಿಲ್ಲ. ಗೇಟ್ ಆಚೆ ಹಾರಲು ಯತ್ನಿಸುತ್ತದೆ. ಅಲ್ಲೇ ಸಮೀಪದಲ್ಲಿರುವ ಅಧಿಕಾರಿಯೊಬ್ಬರು ದೊಣ್ಣೆ ಹಿಡಿದು ಮೊಸಳೆ ಜನರತ್ತ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಇದಿಷ್ಟು ವಿಡಿಯೊದಲ್ಲಿ ದಾಖಲಾಗಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಅದನ್ನು ಸುರಕ್ಷಿತವಾಗಿ ನೀರಿಗೆ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೊಸಳೆಯನ್ನು ನೀರಿಗೆ ಸಾಗಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಹರ ಸಾಹಸವನ್ನೇ ಪಡಬೇಕಾಯಿತು. ಆರಂಭದಲ್ಲಿ ಅದರ ತಲೆಯನ್ನು ಬಟ್ಟೆಯಿಂದ ಮುಚ್ಚಿ ಅದರ ಕಾಲುಗಳನ್ನು ಹಗ್ಗದಿಂದ ಕಟ್ಟಲಾಯಿತು. ಬಳಿಕ ನಾಲ್ವರು ಅರಣ್ಯ ಅಧಿಕಾರಿಗಳು ಮೊಸಳೆಯ ತಲೆ ಮತ್ತು ಮುಂಭಾಗದ ಕಾಲುಗಳನ್ನು ಬಿಗಿದಿರುವ ಹಗ್ಗಗಳನ್ನು ಹಿಡಿದರು. ಈ ವೇಳೆ ಇನ್ನೊಬ್ಬ ಅಧಿಕಾರಿ ಅದರ ಹಿಂದಿನ ಕಾಲುಗಳಿಗೆ ಹಗ್ಗವನ್ನು ಸುತ್ತಿದರು. ಇಬ್ಬರು ಮೊಸಳೆಯ ಬಾಲವನ್ನು ಎತ್ತಿಕೊಂಡರು. ಹೀಗೆ ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ನೀರಿಗೆ ಬಿಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವರು ವಿಡಿಯೊ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಾಪ ಮೊಸಳೆ ಹಸಿದಿರಬೇಕು. ಆಹಾರ ಅರಸಿಕೊಂಡು ಬಂದಿದೆ ಎಂದು ಹಲವರು ಕರುಣೆ ತೋರಿದ್ದಾರೆ. ಇನ್ನು ಕೆಲವರು ಇದು ಫೇಕ್ ವಿಡಿಯೊ, ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಲಾಗಿದೆ ಎಂದೂ ಹೇಳಿದ್ದಾರೆ. ಅದೇನೇ ಇರಲಿ ಇಷ್ಟು ದೈತ್ಯ ದೇಹಿ ಮೊಸಳೆ, ಅದರ ಸಾಹಸವನ್ನು ನೋಡಿ ಹಲವರು ರೋಮಾಂಚನಗೊಂಡಿದ್ದು ಸುಳ್ಳಲ್ಲ.