ಕೊಪ್ಪಳ : ಯಡಿಯೂರಪ್ಪ, ಜಗಮೋಹನ್ ರೆಡ್ಡಿ, ಕನಿಮೋಳಿ, ಅಮಿತ್ ಷಾ ಅವರನ್ನು ಜೈಲಿಗೆ ಹಾಕಿ ಕಾಂಗ್ರೆಸ್ ಪಕ್ಷ ದ್ವೇಷ ರಾಜಕಾರಣ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಕಿಡಿಕಾರಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವನ್ನು ದ್ವೇಷ ರಾಜಕಾರಣವೆಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಪಕ್ಷ ಈ ಹಿಂದೆ ಮಾಡಿದ್ದೇನು? ಕರ್ನಾಟಕದ ಯಡಿಯೂರಪ್ಪ, ಆಂಧ್ರ ಪ್ರದೇಶದ ಜಗಮೋಹನ್ ರೆಡ್ಡಿ, ತಮಿಳು ನಾಡಿನಲ್ಲಿ ಕನಿ ಮೋಳಿ, ಗುಜರಾತ್ ನಲ್ಲಿ ಅಮಿತ್ ಷಾ ಅವರನ್ನು ಬಂಧಿಸಿದ್ದು ಕಾಂಗ್ರೆಸ್ ಪಕ್ಷದ ಸೇಡಿನ ರಾಜಕಾರಣವಲ್ಲದೇ ಮತ್ತೇನು? ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ವಿರುದ್ಧ ಹರಿ ಹಾಯ್ದ ಮಾಜಿ ಸಚಿವ ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ. ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಕ್ಯಾವಿಟರ್ ಪರ ಪ್ರಚಾರದ ವೇಳೆ ಜನಾರ್ಧನ್ ರೆಡ್ಡಿ ಕಾಂಗ್ರೆಸ್ ಪಕ್ಷದ ಜನ್ಮ ಜಾಲಾಡಿದ್ದಾರೆ.
2008 ರಲ್ಲಿ ಸೇಡಿನ ರಾಜಕಾರಣ ದಿಂದ ನನ್ನನ್ನು ಜೈಲಿಗೆ ಅಟ್ಟಲಾಗಿತ್ತು. ಕಾಂಗ್ರೆಸ್ಗೆ ತಾನು ಮಾಡಿದ ಕರ್ಮ ಸುಮ್ಮನೆ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷ ವಿನಾಶದ ಅಂಚಿಗೆ ತಲುಪಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಕಾಂಗ್ರೆಸ್ ವಿರುದ್ದ ಜನಾರ್ಧನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.