Wednesday, January 28, 2026
18.8 C
Bengaluru
Google search engine
LIVE
ಮನೆಸುದ್ದಿಕೊಡಗಿನಲ್ಲಿ ಎರಡು ಕಾಡಾನೆ ಶವವಾಗಿ ಪತ್ತೆ

ಕೊಡಗಿನಲ್ಲಿ ಎರಡು ಕಾಡಾನೆ ಶವವಾಗಿ ಪತ್ತೆ

ಮಡಿಕೇರಿ : ಕೊಡಗಿನ ಖಾಸಗಿ ಎಸ್ಟೇಟ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಕಾಡಾನೆಗಳು ಶವವಾಗಿ ಪತ್ತೆಯಾಗಿವೆ. ಎಸ್ಟೇಟ್ ಕೆರೆಯಲ್ಲಿ ಒಂದು ಆನೆ ಮುಳುಗಿದರೆ, ಮತ್ತೊಂದು ಆನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ.

ಮೊದಲ ಘಟನೆಯಲ್ಲಿ, ಕೊಡಗಿನ ಖಾಸಗಿ ಎಸ್ಟೇಟ್‌ನೊಳಗಿನ ಕೆರೆಯಲ್ಲಿ ಕಾಡು ಆನೆಯ ಶವ ತೇಲುತ್ತಿರುವುದು ಕಂಡುಬಂದಿದೆ. ದಕ್ಷಿಣ ಕೊಡಗಿನ ಅಮ್ಮತ್ತಿ ಸಮೀಪದ ಹಚ್ಚಿನಾಡು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಶುಕ್ರವಾರ ರಾತ್ರಿ ಹಚ್ಚಿನಾಡು ಗ್ರಾಮದ ಎಂ.ನಂದ ಅವರ ಎಸ್ಟೇಟ್‌ಗೆ ಕಾಡಾನೆಗಳ ಹಿಂಡು ನುಗ್ಗಿದೆ. ಎಸ್ಟೇಟ್ ನಲ್ಲಿರುವ ಕೆರೆಯಲ್ಲಿ ಹಿಂಡು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದ ವೇಳೆ ಸುಮಾರು 13 ವರ್ಷ ಪ್ರಾಯದ ಗಂಡು ಆನೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಮಳೆಯಿಂದಾಗಿ ಕೆರೆಯಲ್ಲಿ ಕೆಸರು ಹೆಚ್ಚಿದ್ದು, ಆನೆಗೆ ಮೇಲೆ ಹತ್ತಲು ಸಾಧ್ಯವಾಗಿಲ್ಲ. ಆನೆ ಕೆರೆಯಿಂದ ಮೇಲೆ ಹತ್ತಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಚಿಟ್ಟಿಯಪ್ಪ ಖಚಿತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಹಾಗೂ ಇತರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಆನೆಯನ್ನು ಹೂಳಿದ್ದಾರೆ.

ಇನ್ನೊಂದು ಘಟನೆಯಲ್ಲಿ ಗೋಣಿಕೊಪ್ಪಲು ಸಮೀಪದ ಅರವತೊಕ್ಲು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 10 ವರ್ಷ ಪ್ರಾಯದ ಕಾಡು ಆನೆ ಶವವಾಗಿ ಪತ್ತೆಯಾಗಿದೆ. ಗ್ರಾಮದ ಖಾಸಗಿ ಎಸ್ಟೇಟ್‌ನ ಒಳಗಿನಿಂದ ದುರ್ವಾಸನೆ ಬರುತ್ತಿದ್ದರಿಂದ ಪರಿಶೀಲನೆ ನಡೆಸಿದಾಗ ಆನೆಯ ದೇಹ ಕೊಳೆತಿರುವುದು ಬೆಳಕಿಗೆ ಬಂದಿದೆ. ಆನೆಯು ಹಳೆ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಡಿಸಿಎಫ್ ಜಗನ್ನಾಥ್ ಭೇಟಿ ನೀಡಿದ್ದು, ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments