ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬುಗಡಹಳ್ಳಿ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆ ಇಲ್ಲದೆ ತಮ್ಮ ಊರಿಗೆ ಹೋಗಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಶಾಲೆಗೆ ತೆರಳಲಾಗದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಬುಗಡಹಳ್ಳಿ ಗ್ರಾಮ ಸಕಲೇಶಪುರ ಪಟ್ಟಣದಿಂದ 13 ಕಿಮೀ ದೂರದಲ್ಲಿದೆ. ಈ ಗ್ರಾಮದಲ್ಲಿ 26 ಮನೆಗಳಿದ್ದು, 150 ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ನರು ರಸ್ತೆ ಇಲ್ಲದೆ ಪರದಾಡುತ್ತಿದ್ದಾರೆ.

ಬುಗಡಹಳ್ಳಿ ಗ್ರಾಮಕ್ಕೆ ತಲುಪಲು ಇರುವ ಏಕೈಕ ರಸ್ತೆ ಮಳೆಯಿಂದ ಸಂಪೂರ್ಣ ಕೆಸರುಗದ್ದೆಯಾಗಿದೆ. ವಾಹನಗಳು ಓಡಾಡಲು ಸಾಧ್ಯವಾಗದೆ ಕಾಲ್ನಡಿಗೆಯಲ್ಲಿ ಗ್ರಾಮಸ್ಥರು ತೆರಳುತ್ತಿದ್ದಾರೆ.

ಎರಡು ಕಿಲೋಮೀಟರ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ರಸ್ತೆ ಸಂಪರ್ಕವಿಲ್ಲದೆ ಗ್ರಾಮದೊಳಕ್ಕೆ ವಾಹನಗಳು ಹೋಗುತ್ತಿಲ್ಲ.

ಬುಗಡಹಳ್ಳಿ ಗ್ರಾಮದ ರಸ್ತೆ ನಿರ್ಮಿಸುತ್ತವಂತೆ ಗ್ರಾಮಸ್ಥರು ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಅವರು ಮಾತ್ರ ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನು ರಸ್ತೆ ನಿರ್ಮಾಣಕ್ಕೆ ಅನುದಾನ ಕೊಡದ ಸರ್ಕಾರದ ನಡೆಗೆ ಜನರ ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಗ್ರಾಮಸ್ಥರು ತಾವೆ ಒಂದು ಉಪಾಯ ಕಂಡುಕೊಂಡಿದ್ದು, ಪ್ರತಿ ಮನೆಯಿಂದ 2-3 ಸಾವಿರದಂತೆ ಚಂದಾ ಎತ್ತಿ ರಸ್ತೆ ನಿರ್ಮಿಸಿದ್ದಾರೆ. ಟಿಪ್ಪರ್ ವಾಹನದಲ್ಲಿ ಜಲ್ಲಿಕಲ್ಲು ತರಿಸಿ ರಸ್ತೆಗೆ ಸುರಿದು ಗ್ರಾಮಸ್ಥರು ತಾವೇ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇನ್ನಾದರೂ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದರು.
Post Views: 241


