ಬೆಂಗಳೂರು : ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಜ್ವಲ್ ಮನೆ ತಪಾಸಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಂಶಯಾಸ್ಪದ ಕಲೆಗಳುಳ್ಳ ಬೆಡ್‌ಶೀಟ್ ಪತ್ತೆಯಾಗಿದೆ.
ಮೇ 29ರಂದು ಬಸವನಗುಡಿಯಲ್ಲಿರುವ ಪ್ರಜ್ವಲ್ ಮನೆಯನ್ನು ಕೋರ್ಟ್‌ನಲ್ಲಿ ಸರ್ಚ್ ವಾರೆಂಟ್ ಪಡೆದು ಎಸ್ಐಟಿ ಶೋಧಕ್ಕೊಳಪಡಿಸಿತ್ತು. ಪ್ರಜ್ವಲ್ ಆಗಮನಕ್ಕೂ ಒಂದು ದಿನ ಮೊದಲೇ ನಡೆಸಲಾದ ಈ ತಪಾಸಣೆಯ ವೇಳೆ ಅನುಮಾನದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಪರೀಕ್ಷೆಗಾಗಿ ಕೆಲವು ವಸ್ತುಗಳನ್ನು ಕೊಂಡೊಯ್ಯಲಾಗಿದೆ. ಶೋಧದ ವೇಳೆ ಪತ್ತೆಯಾದ ವಸ್ತುಗಳ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.
ಹೆಚ್.ಡಿ ರೇವಣ್ಣ ಅವರ ಮನೆಯಲ್ಲಿ ಪ್ರಕರಣದ ಎರಡನೇ ಆರೋಪಿ ಪ್ರಜ್ವಲ್ ಕೃತ್ಯ ಎಸಗಿದ ಸ್ಥಳದಲ್ಲಿ ಶೋಧ ನಡೆಸಿ, ಈ ವೇಳೆ ತನಿಖೆಗೆ ಅವಶ್ಯಕ ಎಂದು ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ, ಡಬಲ್ ಕಾಟ್ ಹಾಸಿಗೆ ಮೇಲೆ ಅಲ್ಲಲ್ಲಿ ಇದ್ದ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಬೆಡ್‌ಸ್ಪ್ರೆಡ್ ಕಂಡುಬಂದಿದೆ.
ಸಿಂಗಲ್ ಕಾಟ್ ಹಾಸಿಗೆ ಮೇಲೆಯೂ ಅಲ್ಲಲ್ಲಿ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಮೇಲ್ವಾಸು ಕಂಡುಬಂದಿದೆ. ಜೊತೆಗೆ ಒಂದು ಗ್ರೇ ಕಲರ್ ಅದರ ಮೇಲೆ ಸಿಲ್ವರ್ ಕಲರ್ ಡಿಜೈನ್ ಉಳ್ಳ ವಾಲ್ ಪೇಪರ್ ತುಂಡು ದೊರೆತಿದೆ. ಸದ್ಯ ಎಸ್ಐಟಿ ಅಧಿಕಾರಿಗಳು ಈ ಸೊತ್ತುಗಳನ್ನ ವಶಪಡಿಸಿಕೊಂಡು ಜಪ್ತಿ ಮಾಡಿದ್ದಾರೆ. ಜಪ್ತಿಪಡಿಸಿದ ವಸ್ತುಗಳನ್ನು ತಜ್ಞರ ಪರೀಕ್ಷೆಗೆ ರವಾನಿಸಿದ್ದಾರೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸಂಬಂಧ ಮಹತ್ವದ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿರುವ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಪಾಲ್ಗೊಂಡಿರಬಹುದಾದ ಕೃತ್ಯದ ಸಂಬಂಧ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಸಂಗ್ರಹ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಜೈಲಿಗೆ ಹೋಗಿ ಈಗ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬೇಕಾಗಿರುವ ಭವಾನಿ ರೇವಣ್ಣ ಇನ್ನೂ ಎಸ್‌ಐಟಿ ಕೈಗೆ ಸಿಕ್ಕಿಲ್ಲ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಲ್ಲಿ ಪತ್ತೆ ಹಚ್ಚಲು ಪ್ರಮುಖ ವೈದ್ಯಕೀಯ ವಿಧಾನವಾಗಿರುವ ಪುರುಷತ್ವ ಪರೀಕ್ಷೆಗೆ ಕೋರ್ಟ್ ಒಪ್ಪಿಗೆ ನೀಡಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪುರುಷತ್ವ ಪರೀಕ್ಷೆ ನಡೆಸುತ್ತಿದ್ದಾರೆ.
ಪೊಲೀಸರ ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ತನಿಖೆಗೆ ಅಸಹಕಾರ ನೀಡುತ್ತಿದ್ದರು. ಹೀಗಾಗಿ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ನಡೆಯುತ್ತಿರಲಿಲ್ಲ. ಮಂಗಳವಾರ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಪ್ರಜ್ವಲ್ಗೆ ಹಾಸನದ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಅದೇ ರೀತಿ ಪ್ರಜ್ವಲ್ ಅವರ ಎಸ್ಐಟಿ ಕಸ್ಟಡಿ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಅಧಿಕಾರಿಗಳು ಪರಿಕ್ಷೆ ನಡೆಸಿದ್ದಾರೆ. ಇದೇ ವೇಳೆ ಹಾಸನ ಹಾಗು ಬಸವನಗುಡಿಯ ಮನೆಗೆ ಕರೆದೊಯ್ದು ಸ್ಪಾಟ್ ಮಹಜರ್ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.