ಬೆಂಗಳೂರು : ಕೇವಲ ಒಂದು ವರ್ಷದ ಹಿಂದೆ ಬಿಜೆಪಿಯಿಂದ ಮುಖ ತಿರುಗಿಸಿ ಭಾರೀ ಅಂತರದಲ್ಲಿ ಡಿಕೆ.ಶಿವಕುಮಾರ್ ಅವರು ಗೆಲ್ಲುವಂತೆ ಮಾಡಿದ್ದ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯತ್ತ ಮುಖ ಮಾಡಿ, ಡಿಕೆ.ಬ್ರದರ್ಸ್’ಗೆ ಸೋಲಿನ ರುಚಿ ತೋರಿಸಿದ್ದಾರೆ.
ಕಳೆದ ರಾಜ್ಯ ವಿಧಾನಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 1.22 ಲಕ್ಷ ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಿದ್ದರು. ಅಂದರೆ ಒಟ್ಟು ಮತದಾರರಲ್ಲಿ ಶೇ.75 ಕ್ಕೂ ಹೆಚ್ಚು ಮತದಾರರು ಕಾಂಗ್ರೆಸ್ ಪರ ಚಲಾಯಿಸಿದ್ದರು. ಆದರೆ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಆರ್.ಅಶೋಕ್ ಅವರು 20,000 ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರು.
ಆದರೆ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ಕನಕಪುರದಿಂದ ಕಡಿಮೆ ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ ಮಂಜುನಾಥ್ 83,303 ಮತಗಳನ್ನು ಪಡೆದರೆ, ಸುರೇಶ್ 1.08 ಲಕ್ಷ ಮತಗಳನ್ನು ಪಡೆದಿದ್ದಾರೆ.
ರಾಮನಗರದಲ್ಲಿ ಮಂಜುನಾಥ್ ಗಿಂತ ಸುರೇಶ್ 145 ಹೆಚ್ಚು ಮತ ಪಡೆದಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರವನ್ನು ಈ ಹಿಂದೆ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದರು. 2023ರಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್ ಸುಮಾರು 10,000 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.


