ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ್ ಮತ್ತು ಗ್ಯಾಂಗ್ ಜೈಲು ಪಾಲಾಗಿದ್ದು, ನಾಲ್ವರು ಆರೋಪಿಗಳನ್ನು 24ನೇ ಎಸಿಎಂಎಂ ಕೋರ್ಟ್ ಶನಿವಾರ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್ ಅವರ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ಅವರನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಯ್ತು.
ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಪೊಲೀಸರು ಮತ್ತೆ ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣದ ಇತರ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಇತರರಿಗೆ ಎರಡು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಜೂನ್ 11 ರಿಂದ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದರು. ಇಂದು ದರ್ಶನ್ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಲಾಗಿದೆ.
ಈ ಪ್ರಕರಣ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಅನೇಕ ಸ್ಥಳಗಳಿಗೆ ತೆರಳಿ ಮಹಜರು ಮಾಡಲಾಗಿದೆ. ಪವಿತ್ರಾ ಗೌಡ ಮನೆಯಲ್ಲೂ ಮಹಜರು ಮಾಡಲಾಗಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದೆ.