ಬೆಂಗಳೂರು : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಹೋರಾಟ ತೀವ್ರಗೊಳಿಸುವ ನಿರ್ಣಯವನ್ನು ಗುರುವಾರ ಇಲ್ಲಿ ನಡೆದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಕೈಗೊಂಡಿದೆ.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯ ಸರ್ಕಾರ ಜನರ ಹಿತ ಕಡೆಗಣಿಸಿದೆ. ಆರ್ಥಿಕ ಶಿಸ್ತು ಇಲ್ಲವಾಗಿದೆ. ಆರ್ಥಿಕ ದಿವಾಳಿಯತ್ತ ರಾಜ್ಯ ಸಾಗುತ್ತಿದೆ. ಅಭಿವೃದ್ಧಿ ಕಡೆ ಗಮನ ಕೊಡದೇ ಅಲ್ಪಸಂಖ್ಯಾತರನ್ನು ಓಲೈಸಲು, ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಗಮನ ನೀಡಿದೆ. ಕಾನೂನು- ಸುವ್ಯವಸ್ಥೆ ಹದಗೆಟ್ಟು ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಗೆ ಕಾರಣವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೊಲಗಿಸಬೇಕು. ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಡ ಹಾಕಬೇಕು ಎಂಬ ನಿರ್ಣಯವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಂಡಿಸಿದರು. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಬಂಗಾರು ಹನುಮಂತು ನಿರ್ಣಯವನ್ನು ಅನುಮೋದಿಸಿದರು.
ಲೋಕಸಭಾ ಚುನಾವಣೆಯಲ್ಲಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಐಎನ್‌ಡಿಐಎ ಅಪಪ್ರಚಾರ ನಡೆಸಿತ್ತು. ಪೊಳ್ಳು ಭರವಸೆ ಮೂಲಕ ಅಧಿಕಾರ ಪಡೆಯಲು ಯತ್ನಿಸಿತ್ತು. ಆದರೆ, ಪ್ರಜ್ಞಾವಂತ ಮತದಾರರು ಅವರ ಷಡ್ಯಂತ್ರವನ್ನು ಬೆಂಬಲಿಸಲಿಲ್ಲ. ಅವರ ಸುಳ್ಳಿನ ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ. ಬಿಜೆಪಿ ಸಾಧನೆಗಳನ್ನು ಮೆಚ್ಚಿ ಮೂರನೇ ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸುವ ಮತ್ತೊಂದು ನಿರ್ಣಯವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದರು. ಮಾಜಿ ಸಚಿವ ಶಶಿಕಲಾ ಜೊಲ್ಲೆ, ದೊಡ್ಡನಗೌಡ ಅನುಮೋದಿಸಿದರು.


