ಬೆಂಗಳೂರು : ನಟ ಶಿವರಾಜ್ಕುಮಾರ್ಗೆ ಇರೋ ಕ್ರೇಜ್ ತುಂಬಾನೇ ದೊಡ್ಡದು. ಇಡೀ ಕರ್ನಾಟಕದದಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರು ಹೋದಲ್ಲೆಲ್ಲ ಫ್ಯಾನ್ಸ್ ಕಿಕ್ಕಿರುದು ನೆರೆಯುತ್ತಾರೆ. ಅವರು ಸಿನಿಮಾ ಸೆಟ್ಗೆ ಬಂದರೆ ಅದ್ದೂರಿ ಸ್ವಾಗತ ಸಿಗುತ್ತದೆ. ಈಗ ಶಿವರಾಜ್ಕುಮಾರ್ ಅವರು ‘ಉತ್ತರಕಾಂಡ’ ಸಿನಿಮಾ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ತಂಡದವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಹಾಗೂ ನಟ ಡಾಲಿ ಧನಂಜಯ್ ಅವರು ‘ರತ್ನನ್ ಪ್ರಪಂಚ’ ಹಾಗೂ ‘ಗುರುದೇವ ಹೊಯ್ಸಳ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್ನಲ್ಲಿ ‘ಉತ್ತರಕಾಂಡ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಪಾತ್ರವರ್ಗ ಹಿರಿದಾಗುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್, ಧನಂಜಯ್ ಜೊತೆಗೆ ಐಶ್ವರ್ಯಾ ರಾಜೇಶ್, ರಂಗಾಯಣ ರಘು, ಯೋಗರಾಜ್ ಭಟ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರದ ಸೆಟ್ಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದು, ಅದ್ದೂರಿ ಸ್ವಾಗತ ಸಿಕ್ಕಿದೆ.
ಶಿವರಾಜ್ಕುಮಾರ್ ಅವರಿಗೆ ತಮಟೆ, ವಾದ್ಯಗಳ ಬಾರಿಸಿ ಎಂಟ್ರಿ ಕೊಡಿಸಲಾಗಿದೆ. ಎಲ್ಲರೂ ಶಿವಣ್ಣ ಅವರ ಮುಖವಾಡ ಧರಿಸಿದ್ದರು. ಶಿವರಾಜ್ಕುಮಾರ್ಗೆ ಹಾರ ಹಾಕಿ ಸ್ವಾಗತ ಕೋರಲಾಗಿದೆ. ‘ಕೆಆರ್ಜಿ ಕನೆಕ್ಟ್ಸ್’ ಮೂಲಕ ಈ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ವಿಡಿಯೋ ಭರ್ಜರಿ ವೀವ್ಸ್ ಪಡೆದಿದೆ. ರೋಹಿತ್ ಪದಕಿ ಅವರು ‘ಉತ್ತರಕಾಂಡ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಸಂಪೂರ್ಣ ಕಥೆ ಉತ್ತರ ಕರ್ನಾಟಕದ ಭಾಗದಲ್ಲಿ ಶೂಟ್ ಆಗಲಿದೆ. ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಸ್ವಾಮಿ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಈ ಚಿತ್ರಕ್ಕೆ ಇರಲಿದೆ. ‘ಉತ್ತರಕಾಂಡ’ ಚಿತ್ರದ ಶೀರ್ಷಿಕೆ ವಿನ್ಯಾಸ ಮತ್ತು ಪೋಸ್ಟರ್ ಗಮನ ಸೆಳೆಯುತ್ತಿದೆ.
ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಶಿವಣ್ಣ ಅವರು ಇಷ್ಟು ದಿನ ಅಲ್ಲಿ ಪ್ರಚಾರ ಮಾಡುತ್ತಿದ್ದರು. ಈಗ ಅವರು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ.