Wednesday, January 28, 2026
20.2 C
Bengaluru
Google search engine
LIVE
ಮನೆ#Exclusive NewsTop Newsಗಾಂಧಿನಗರದಲ್ಲಿ ಈಗ ‘ಚಿಲ್ಲಿ ಚಿಕನ್​’ ಮೇಲೆ ಹೆಚ್ಚಿದೆ ನಿರೀಕ್ಷೆ; ಟ್ರೇಲರ್​ ನೋಡಿ..

ಗಾಂಧಿನಗರದಲ್ಲಿ ಈಗ ‘ಚಿಲ್ಲಿ ಚಿಕನ್​’ ಮೇಲೆ ಹೆಚ್ಚಿದೆ ನಿರೀಕ್ಷೆ; ಟ್ರೇಲರ್​ ನೋಡಿ..

ಬೆಂಗಳೂರು : ಕನ್ನಡದ ‘ಚಿಲ್ಲಿ ಚಿಕನ್​’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಹೋಟೆಲ್ ಕೆಲಸ ಮಾಡುವ ಹುಡುಗರ ಕಥೆ ಇಟ್ಟುಕೊಂಡು ನಿರ್ದೇಶಕ ಪ್ರತೀಕ್ ಪ್ರಜೋಷ್ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ವಿಶೇಷ ಏನೆಂದರೆ, ಈ ಸಿನಿಮಾದ ಕಥೆ ಹುಟ್ಟಿದ್ದೇ ರೆಸ್ಟೋರೆಂಟ್​ವೊಂದರಲ್ಲಿ. ಹೌದು, ರೆಸ್ಟೋರೆಂಟ್​ನಲ್ಲಿ ಸಂಗೀತ ನಿರ್ದೇಶಕ ಸಿದ್ಧಾಂತ್​ ಸುಂದರ್ ಅವರಿಗೆ ಈ ಕಾನ್ಸೆಪ್ಟ್ ಹೊಳೆದಿತ್ತು. ಅದನ್ನು ಅವರು ನಿರ್ದೇಶಕ ಪ್ರತೀಕ್ ಪ್ರಜೋಶ್​ಗೆ ತಿಳಿಸಿದ ಬಳಿಕ ಅವರು ಆ ಒಂದು ಲೈನ್ ಕಥೆಯನ್ನು ಇಟ್ಟುಕೊಂಡು ಸಿನಿಮಾ ನಿರ್ದೇಶಿಸಿದರು. ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಾ ಚೈನೀಸ್ ರೆಸ್ಟೋರೆಂಟ್ ಆರಂಭಿಸಬೇಕು ಎಂದು ಕನಸು ಕಾಣುವ ಹುಡುಗರ ಕನಸಿಗೆ ಯಾವೆಲ್ಲ ಅಡೆ-ತಡೆಗಳು ಬರುತ್ತವೆ ಎಂಬ ಕಹಾನಿ ‘ಚಿಲ್ಲಿ ಚಿಕನ್’ ಸಿನಿಮಾದಲ್ಲಿ ಇದೆ.

ಬೆಂಗಳೂರಿನಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ‘ಚಿಲ್ಲಿ ಚಿಕನ್​’ ಸಿನಿಮಾ ಮಾಡಲಾಗಿದೆ. ಕಳೆದ ತಿಂಗಳು ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈಗ ಟ್ರೇಲರ್ ಸದ್ದು ಮಾಡುತ್ತಿದೆ. ಸಿನಿಮಾ ಬಗ್ಗೆ ಸಂಗೀತ ನಿರ್ದೇಶಕ ಸಿದ್ಧಾಂತ್​ ಸುಂದರ್​ ಮಾತನಾಡಿದ್ದಾರೆ. ‘ಸದ್ಯ ಎಲ್ಲ ಕಡೆಗಳಲ್ಲಿ ನಮ್ಮ ಸಿನಿಮಾದ ಬಗ್ಗೆ ಜನರು ಮಾತಾಡುತ್ತಿದ್ದಾರೆ. ನೈಜ ಘಟನೆಯ ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ. ಸಿನಿಮಾದಲ್ಲಿ 5 ಹಾಡುಗಳಿವೆ. ಅವುಗಳಿಗೆ ರ‍್ಯಾಪರ್ ಮಾರ್ಟಿನ್ ಯೋ ಸಾಹಿತ್ಯ ಬರೆದಿದ್ದಾರೆ. ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯವರೂ ಕೂಡ ನೋಡಲೇ ಬೇಕಾದ ಸಿನಿಮಾ ಇದು’ ಎಂದು ಅವರು ಹೇಳಿದ್ದಾರೆ.

‘ಚಿಲ್ಲಿ ಚಿಕನ್​’ ಸಿನಿಮಾದಲ್ಲಿ ಬಿ.ವಿ. ಶೃಂಗಾ ಅವರು ನಾಯಕನಾಗಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಾವೆಲ್ಲಾ ಇಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇವೆ. ಜನರ ಸಹಕಾರ ನಮಗೆ ಬೇಕು. ನಾನು ಈ ಸಿನಿಮಾದಲ್ಲಿ ರೆಸ್ಟೋರೆಂಟ್ ಮಾಲೀಕನ ಪಾತ್ರವನ್ನು ಮಾಡಿದ್ದೇನೆ. ಈ ಕಥೆ ಕೇಳಿದಾಗ ಇಂದಿನ ಯುವಜನರಿಗೆ ಹೇಳಬೇಕಾದ ವಿಷಯ ಇದರಲ್ಲಿ ಇದೆ ಅನಿಸಿತು. ಹ್ಯೂಮರ್, ಫ್ಯಾಮಿಲಿ ಡ್ರಾಮಾವನ್ನು ನಿರ್ದೇಶಕರು ಬಳಸಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದು ಚೈನೀಸ್ ರೆಸ್ಟೋರೆಂಟ್ ಶುರುಮಾಡುವ ಆಸೆ ಇರುವ ಹುಡುಗನ ಪಾತ್ರ ನನ್ನದು’ ಎಂದು ಅವರು ಹೇಳಿದ್ದಾರೆ.

ಈ ಸಿನಿಮಾವನ್ನು ಈಗಾಗಲೇ ನೋಡಿದ ರಮೇಶ್‌ ಅರವಿಂದ್, ಹೇಮಂತ್ ರಾವ್ ಮತ್ತು ಬೇರೆ ಭಾಷೆಯ ಅನೇಕರು ಮೆಚ್ಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಒಡೆದು ಹಾಕಲ್ಪಟ್ಟ ಕಾವೇರಿ ಚಿತ್ರಮಂದಿರದ ಬಗ್ಗೆ ಈ ಚಿತ್ರತಂಡ ಒಂದು ಹಾಡು ಸಿದ್ಧಪಡಿಸಿದೆ. ಈ ಗೀತೆಗೆ ಪತ್ರಕರ್ತ ಶ್ರೀಧರ್ ಶಿವಮೊಗ್ಗ ಅವರು ಸಾಹಿತ್ಯ ಬರೆದಿದ್ದಾರೆ. ನಟಿ ನಿತ್ಯಶ್ರೀ ಅವರು ಕನ್ನಡದಲ್ಲಿ ಇದು 2ನೇ ಸಿನಿಮಾ. ಈಗಾಗಲೇ ಅವರು ತಮಿಳು, ತೆಲಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಒಂದಿಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ‘ಈ ಸಿನಿಮಾಗೆ ತಂಡದ ಶ್ರಮ ತುಂಬಾ ಇದೆ. ಎಲ್ಲ ಕಲಾವಿದರು ಭಾಷೆಯನ್ನು ಕಲಿತು ನಟಿಸಿ, ಡಬ್ಬಿಂಗ್ ಸಹ ಮಾಡಿದ್ದಾರೆ’ ಎಂದು ಅವರು ಹೇಳಿದರು. ಕಲಾವಿದರಾದ ರಿನಿ, ಬಿಜು ತಾಂಜಿಂ, ಹಿರಾಕ್ ಸೋನಾವಾಲ್, ಜಿಂಪಾ ಭುಟಿಯಾ, ನಿರ್ಮಾಪಕ ದೀಪ್ ಭೀಮಾಜಿಹಾನಿ ಅವರು ಟ್ರೇಲರ್​ ಬಿಡುಗಡೆ ವೇಳೆ ಸಿನಿಮಾ ಬಗ್ಗೆ ಮಾತನಾಡಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments