ಬೆಂಗಳೂರು: ಬೆಂಗಳೂರಿನಲ್ಲಿ ಸಾಕಷ್ಟು ಸ್ಮಶಾನಗಳಿವೆಯಾದರೂ, ಕಲ್ಪಲ್ಲಿ ಸ್ಮಶಾನ ನಗರದ ಅತ್ಯಂತ ಹಳೆಯ ಸ್ಮಶಾನಗಳಲ್ಲಿ ಒಂದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಸ್ಮಶಾನವಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ, ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

ಸ್ಮಶಾನದಲ್ಲಿ ಸಮಾಧಿ ಅಗೆಯುವವರು ಹಾಗೂ ಅವರ ಕುಟುಂಬಸ್ಥರು ಸೇರಿ ಸುಮಾರು 40ಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಅಲ್ಲದೆ, ಇಲ್ಲಿ ನೋಂದಣಿ ಕಚೇರಿ ಕೂಡ ಇದೆ. ಅಡುಗೆ, ಸ್ನಾನ, ಶೌಚಾಲಯ ಎಲ್ಲದಕ್ಕೂ 35-40 ಮಂದಿಗೆ 2 ಟ್ಯಾಂಕರ್ ನೀರಿದೆ. 6 ನಲ್ಲಿಗಳಿದ್ದರೂ ಎರಡು ನಲ್ಲಿಗಳು ಮಾತ್ರ ಆಗಾಗ್ಗೆ ಕೆಲಸ ಮಾಡುತ್ತವೆ. ನೀರಿನ ಗುಣಮಟ್ಟ, ನಿರಂತರ ಹೊಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಇದನ್ನು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ ಎಂದು ತಿಳಿದು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಸ್ಮಶಾನದಲ್ಲಿ ಸಮಾಧಿ ಅಗೆಯುವ ಕೆಲಸ ಮಾಡುವ ಕಿರಣ್ ಎಂಬುವವರು ಹೇಳಿದ್ದಾರೆ.

ಸತ್ತವರನ್ನು ಮಾತ್ರವಷ್ಟೇ ಅಲ್ಲ, ನಮ್ಮ ಕನಸು ಹಾಗೂ ಮಕ್ಕಳ ಕನಸುಗಳನ್ನು ಸಮಾಧಿ ಮಾಡುವಂತಾಗಿದೆ ಎಂದು ಮತ್ತೊಬ್ಬ ವ್ಯಕ್ತಿ ಭಾವುಕರಾಗಿ ಮಾತನಾಡಿದ್ದಾರೆ. ಸ್ಮಶಾನದ ಏಕೈಕ ಮಹಿಳಾ ರಿಜಿಸ್ಟ್ರಾರ್ ಸತ್ಯಾ ಅವರು ಮಾತನಾಡಿ, ಸ್ಮಶಾನದಲ್ಲಿ ಎರಡು ಶೌಚಾಲಯಗಳಿದ್ದರು. ಅವುಗಳ ಸ್ಥಿತಿ ಶೋಚನೀಯವಾಗಿದೆ. ಅವುಗಳ ಸ್ಥಿತಿ ಹೇಳತೀರದ್ದಾಗಿದೆ. ಅವು ಬಳಕೆಗೆ ಸೂಕ್ತವಲ್ಲ. ಮುಖ್ಯವಾಗಿ ಮಹಿಳೆಯರಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶೌಚಾಲಯ ಬಳಕೆ ಮಾಡಬೇಕೆಂದರೆ ಸುಮಾರು 1 ಕಿಮೀ ದೂರದಲ್ಲಿರುವ ನನ್ನ ಮನೆಗೆ ಹೋಗಬೇಕು. ಹೀಗಾಗಿ ಆಗಾಗ್ಗೆ ಕಚೇರಿ ಬಂದ್ ಮಾಡಬೇಕಾಗುತ್ತದೆ. ಆದರೆ, ಈ ಗ್ಯಾಪ್ ನಲ್ಲಿ ಕಚೇರಿಗೆ ಬರುವವರಿಗೆ ನಮ್ಮ ಪರಿಸ್ಥಿತಿ ಅರ್ಥವಾಗುವುದಿಲ್ಲ. ಅವರಿಗೆ ವಿವರಿಸೋಕೆ ಆಗುವುದೂ ಇಲ್ಲ. ಕಚೇರಿಗೆ ಬರುವವರು ತಕ್ಷಣವೇ ತಮ್ಮ ಕೆಲಸವಾಗಬೇಕೆಂಂದು ನಿರೀಕ್ಷಿಸುತ್ತಾರೆ. ಆದರೆ, ನಮ್ಮ ಮೂಲಭೂತ ಅಗತ್ಯವನ್ನು ನೋಡುವವರು ಯಾರು? ಎಂದು ಪ್ರಶ್ನಿಸಿದ್ದಾರೆ,

ಪ್ರತಿನಿತ್ಯ ಸ್ಮಶಾನಕ್ಕೆ 7-13 ಮೃತದೇಹಗಳು ಬರುತ್ತವೆ. ಪ್ರತೀ ಮೃತದೇಹದೊಂದಿಗೆ 30-40 ಜನರು ಬರುತ್ತಾರೆ. ಬರುವವರು ಆಗಾಗ್ಗೆ ನೀರು ಕೇಳುತ್ತಾರೆ. ನೀರು ಸಿಗದಿದ್ದಾಗ ನಮ್ಮನ್ನು ದೂಷಿಸುತ್ತಾರೆ. ಆದರೆ, ನಮಗೆ ಎಲ್ಲಿಂದ ನೀರು ಸಿಗುತ್ತದೆ? ನಮಗೂ ಕುಡಿಯಲು ನೀರು ಸಿಗುತ್ತಿಲ್ಲ. ಹಬ್ಬ ಹಾಗೂ ತಿಥಿ ದಿನಗಳಲ್ಲಿ ಹೆಚ್ಚೆಚ್ಚು ಜನರು ಸ್ಮಶಾನಕ್ಕೆ ಬಂದಾಗ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೂಜೆ ಸಲ್ಲಿಸಲು ಬರುವ ಜನರು ಸಮಾಧಿಗಳ ಮೇಲೆ ಒಣಗಿದ ಹಾಗೂ ಬಿಸಾಡಿದ ಹೂಮಾಲೆಗಳು ತುಂಬಿವೆ ಎಂದು ದೂರುತ್ತಾರೆ. ಆದರೆ, ಸ್ಮಶಾನದಲ್ಲಿ ಡಸ್ಟ್‌ಬಿನ್ ಲಭ್ಯವಿಲ್ಲ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ. ಸ್ಮಶಾನ ಎಂದರೆ, ದುಃಖ, ನೋವು. ಆದರೆ, ನಾವು ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಆದರೆ, ಸಮಾಧಿ ಅಗೆಯುವುದರ ಮೇಲೆ ನಮ್ಮ ಜೀವನ ಅವಲಂಬಿಸಿದೆ. ಮೂಲಸೌಕರ್ಯಗಳಿಲ್ಲದಿದ್ದರೂ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಒಂದು ವೇಳೆ ನಮ್ಮ ಕೆಲಸ ನಿಲ್ಲಿಸಿದರೆ ಏನಾಗುತ್ತದೆ? ಜನರ ನೋಟ ಯಾರತ್ತ ತಿರುಗುತ್ತದೆ? ಆಗ ಬಿಬಿಎಂಪಿ ಯಾರನ್ನು ಅವಲಂಬಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಬಿಬಿಎಂಪಿ ಪೂರ್ವದ ಜಂಟಿ ಆಯುಕ್ತ ಸರೋಜಾ ಬಿಬಿ ಅವರು ಪ್ರತಿಕ್ರಿಯೆ ನೀಡಿ, ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights