ಬೆಂಗಳೂರು : 9ನೇ ಆವೃತ್ತಿಯ ಟಿ20 ವಿಶ್ವಕಪ್ ಮುಂದಿನ ತಿಂಗಳಿನಿಂದ ಅಂದರೆ ಜೂನ್ 2 ರಿಂದ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ವಿಶ್ವಕಪ್‌ಗೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೇರಿದಂತೆ ಈಗಾಗಲೇ ಭಾಗಶಃ ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಇದರಲ್ಲಿ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ತಂಡ ಕೂಡ ಸೇರಿದೆ. ಈ ಮಿನಿ ವಿಶ್ವಸಮರಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಕಳೆದ ತಿಂಗಳು ಅಂದರೆ ಏಪ್ರಿಲ್ 30 ರಂದೇ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿತ್ತು. ತಂಡ ಪ್ರಕಟಿಸಿದ 15 ದಿನಗಳ ಬಳಿಕ ಇದೀಗ ಹೊಸ ವಿವಾದವೊಂದು ಹುಟ್ಟಿಕೊಂಡಿದ್ದು, ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ದಕ್ಷಿಣ ಆಫ್ರಿಕಾ ಸಾಕಷ್ಟು ವಿರೋಧಗಳನ್ನು ಎದುರಿಸಬೇಕಾಗಿದೆ.

ದಕ್ಷಿಣ ಆಫ್ರಿಕಾದ ಮಾಜಿ ಕ್ರೀಡಾ ಸಚಿವ ಫಿಕಿಲೆ ಎಂಬಾಲುಲಾ ತಂಡದ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ‘ಮುಂಬರುವ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಏಕೈಕ ಆಫ್ರಿಕನ್ ಆಟಗಾರನನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಕೇವಲ ಒಬ್ಬ ಕಪ್ಪು ವರ್ಣಿಯ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡುವ ನಿರ್ಧಾರವು ವಿಶ್ವಕಪ್ ತಂಡದಲ್ಲಿ ಎಲ್ಲಾ ದಕ್ಷಿಣ ಆಫ್ರಿಕನ್ನರನ್ನು ಪ್ರತಿನಿಧಿಸುವುದಿಲ್ಲ. ಅಲ್ಲದೆ ಈ ನಿರ್ಧಾರ ಖಂಡಿತವಾಗಿಯೂ ಬದಲಾವಣೆಯ ಹಾದಿಯಲ್ಲಿ ಹಿಮ್ಮುಖವಾಗಿ ಹೆಜ್ಜೆ ಹಾಕಿದಂತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಎಸ್‌ಎಬಿಸಿ ಸ್ಪೋರ್ಟ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಿಎಸ್‌ಎ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಾಜಿ ಅಧ್ಯಕ್ಷ ರೇ ಮಾಲ್ಲಿ, ‘ಜಗತ್ತು ಸಾಕಷ್ಟು ಬದಲಾಗಿದೆ. ಆದರೆ ಕ್ರಿಕೆಟ್ ವಿಚಾರದಲ್ಲಿ ಮಾತ್ರ ನಾವು ಸಾಕಷ್ಟು ಹಿಂದುಳಿದಿದ್ದೇವೆ. ಮುಂದೆ ಸಾಗುವ ಬದಲು ಒಂದು ಹೆಜ್ಜೆ ಹಿಂದೆ ಇಟ್ಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದಲ್ಲಿ ಹೆಚ್ಚು ಕಪ್ಪು ವರ್ಣಿಯ ಆಟಗಾರರನ್ನು ಏಕೆ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಇದು ಸ್ವೀಕಾರಾರ್ಹವಲ್ಲ ಈ ದೇಶd ಏಕತೆಗಾಗಿ ಮಾತುಕತೆ ನಡೆಸುವಂತೆ ನಮ್ಮನ್ನು ಕೇಳಿದ ಜನರಿಗೆ ನಾವು ದ್ರೋಹ ಮಾಡಿದ್ದೇವೆ ಎನಿಸುತ್ತಿದೆ. ಹೀಗಾಗಿ ಆಯ್ಕೆ ಸಮಿತಿ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು’ ಎಂದಿದ್ದಾರೆ.

ವಾಸ್ತವವಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಆಯ್ಕೆ ಸಮಿತಿಯನ್ನು ಹೊಂದಿಲ್ಲ. ಹೀಗಾಗಿ ಟಿ20 ವಿಶ್ವಕಪ್ ತಂಡವನ್ನು ಮುಖ್ಯ ತರಬೇತುದಾರರಾದ ಶುಕ್ರಿ ಕಾನ್ರಾಡ್ (ಟೆಸ್ಟ್) ಮತ್ತು ರಾಬ್ ವಾಲ್ಟರ್ (ಸೀಮಿತ ಓವರ್) ಆಯ್ಕೆ ಮಾಡಿದ್ದಾರೆ. ಇನ್ನು ಈ ವಿವಾದದ ಬಗ್ಗೆ ಮಾತನಾಡಿದ ವಾಲ್ಟರ್, ‘ ಟಿ20 ವಿಶ್ವಕಪ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ನಮ್ಮಲ್ಲಿ ಪ್ರತಿಭಾವಂತ ದೇಶೀಯ ಪ್ರತಿಭೆಗಳ ಕೊರತೆ ಇದೆ. ಅಲ್ಲದೆ ಲುಂಗಿ ಎನ್‌ಗಿಡಿ ಕೂಡ ಒಬ್ಬ ಕಪ್ಪು ಆಫ್ರಿಕನ್ ಆಗಿದ್ದು, ಅವರು ಮೀಸಲು ಆಟಗಾರನಾಗಿ ತಂಡದೊಂದಿಗೆ ಇರುತ್ತಾರೆ. ಆದರೆ ಅವರು ಮುಖ್ಯ ತಂಡದ ಭಾಗವಾಗಿಲ್ಲ ಎಂದರು.
ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಚುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಅನ್ರಿಚ್ ನೋಕಿಯಾ, ಕಗಿಸೊ ರಬಾಡ, ರಿಯಾನ್ ರಿಜೆಲ್‌ಟನ್, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್.


