ಬೆಂಗಳೂರು : ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಇಂದು ನಡೆಯಲಿದೆ. ಈ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7.30 ರಿಂದ ಆರಂಭವಾಗಲಿದೆ. ಒಂದೆಡೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿಯ ಸುರಕ್ಷತೆ ಆರ್ಸಿಬಿಗೆ ದೊಡ್ಡ ಆತಂಕ ತಂದೊಡ್ಡಿದೆ. ಹೀಗಾಗಿ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದೆ. ಅಲ್ಲದೆ ಪತ್ರಿಕಾಗೋಷ್ಠಿಯನ್ನು ಸಹ ನಡೆಸಿಲ್ಲ. ಮಹತ್ವದ ಪಂದ್ಯಕ್ಕೂ ಮುನ್ನ ಫ್ರಾಂಚೈಸಿಯ ಈ ನಡೆ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಭಯೋತ್ಪಾದಕ ಚಟುವಟಿಕೆಗಳ ಶಂಕೆ ಮೇರೆಗೆ ಗುಜರಾತ್ ಪೊಲೀಸರು ನಾಲ್ವರು ಶಸ್ತ್ರಾಸ್ತ್ರಧಾರಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅವರಿಂದ ಶಸ್ತ್ರಾಸ್ತ್ರಗಳು, ಅನುಮಾನಾಸ್ಪದ ವೀಡಿಯೊಗಳು ಮತ್ತು ಪಠ್ಯ ಸಂದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ನಾಲ್ವರು ಶಂಕಿತರ ಬಂಧನದಿಂದಾಗಿ ಆರ್‌ಸಿಬಿ ಟೆನ್ಷನ್‌ಗೆ ಒಳಗಾಗಿದ್ದು, ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದೆ. ಆದರೆ, ಈ ಘಟನೆಯ ನಂತರವೂ ರಾಜಸ್ಥಾನ ತಂಡ ಮೈದಾನದಲ್ಲಿ ಅಭ್ಯಾಸ ನಡೆಸಿದೆ. ಮತ್ತೊಂದೆಡೆ, ಎರಡೂ ತಂಡಗಳು ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿವೆ. ಅಭ್ಯಾಸದ ಅವಧಿಯನ್ನು ಏಕೆ ರದ್ದುಗೊಳಿಸಲಾಯಿತು ಎಂಬುದರ ಬ್ಗಗೆ ಆರ್‌ಸಿಬಿ ಫ್ರಾಂಚೈಸಿ ಯಾವುದೇ ಅಧಿಕೃತ ಹೇಳಿಕೆಯಲ್ಲಿ ತಿಳಿಸದಿದ್ದರೂ, ವಿರಾಟ್ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಹೇಳುತ್ತಿದೆ.