3ನೇ ಮಗುವೂ ಹೆಣ್ಣೆಂದು ಮನೆಯಲ್ಲಿಯೇ ಗರ್ಭಪಾತ; ಮಹಿಳೆ ಸಾವು! ಗರ್ಭಪಾತ ಮಾಡ್ತಿದ್ದ ತಂಡ ಪೊಲೀಸ್ ಬಲೆಗೆ

ಬಾಗಲಕೋಟೆ : 3 ನೇ ಮಗುವೂ ಹೆಣ್ಣೆಂದು ಮನೆಯಲ್ಲಿಯೇ ಗರ್ಭಪಾತ ಮಾಡಿ ಮಹಿಳೆ ಸಾವಿಗೀಡಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಸದ್ಯ ಗರ್ಭಪಾತ ನಡೆಸುತ್ತಿದ್ದ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗರ್ಭಿಣಿಯೊಬ್ಬರ ಸಾವಿನ ನಂತರ ಜಿಲ್ಲೆಯಲ್ಲಿ ಗರ್ಭಪಾತ ನಡೆಸುವ ತಂಡದ ಮಾಹಿತಿ ಹೊರಬಿದ್ದಿದೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸೋನಾಲಿ (33) ಗರ್ಭಪಾತದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯ ಮಹಾಲಿಂಗಪುರದ ಮನೆಯಲ್ಲಿ ಗರ್ಭಪಾತ ನಡೆದಿದೆ. ಪ್ರಕರಣದ ಮಾಹಿತಿ ಪಡೆದ ಸಾಂಗ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಾರುತಿ ಕರವಾಡ (ಮಿರಜ್), ವಿಜಯ್ ಗವಳಿ (ಮೃತಳ ಸಂಬಂಧಿ), ನರ್ಸ್ ಕವಿತಾ ಬಂಧಿತರು.
ಸೋನಾಲಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೇ ಮಗು ಕೂಡ ಹೆಣ್ಣು ಎಂಬುದು ಪತ್ತೆಯಾಗಿದೆ. ಅನಧಿಕೃತ ವಾಗಿ ಮಹಾರಾಷ್ಟ್ರದಲ್ಲಿ ಸ್ಕ್ಯಾನಿಂಗ್ ನಡೆಸಿ ಮಗುವಿನ ಭ್ರೂಣ ಪತ್ತೆ ಮಾಡಲಾಗಿದೆ. ನಂತರ ಮಹಾಲಿಂಗಪುರ ಮೂಲದ ನರ್ಸ್ ಕವಿತಾ ಮೂಲಕ 40 ಸಾವಿರ ರೂ.ಗಳಿಗೆ ಗರ್ಭಪಾತ ಮಾಡಿಸಲಾಗಿದೆ. 2022 ರಲ್ಲಿ ಇದೇ ವಿಚಾರಕ್ಕೆ ಕವಿತಾ ಮೇಲೆಯೂ ದೂರು ದಾಖಲಾಗಿತ್ತು. ಸಾಂಗ್ಲಿ ಠಾಣೆಯಿಂದ ಪ್ರಕರಣ ಬಾಗಲಕೋಟೆಗೆ ವರ್ಗಾಯಿಸಲಾಗಿದೆ. ಜಿಲ್ಲೆಯ ಪೊಲೀಸರು ಈಗ ತನಿಖೆ ಕೈಗೊಂಡಿದ್ದಾರೆ.




