ಧಾರವಾಡ : ಗೃಹಬಳಕೆ ಸಿಲಿಂಡರ್ ಸ್ಪೋಟಗೊಂಡಿದ್ದು ಓರ್ವ ಮಹಿಳೆ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಕಲ್ಲೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮಹಾದೇವಿ (30) ಎಂಬ ಮಹಿಳೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಉಳಿದಂತೆ ಸುರೇಶ ವಗೆಣ್ಣವರ, ಶ್ರೀಧರ ವಗೆಣ್ಣವರ, ಚಿನ್ನಪ್ಪ ವಗೆಣ್ಣವರ ಹಾಗೂ ಗಂಗವ್ವ ವಗೆಣ್ಣವರ ಎಂಬುವರು ಗಾಯಗೊಂಡಿದ್ದಾರೆ.
ಅವರನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಗ್ಯಾಸ್ ಲೀಕೇಜ್ ಆಗಿತ್ತು. ಏಕಾಏಕಿ ಸ್ಪಾರ್ಕ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಮನೆ ತುಂಬ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ. ಅಡುಗೆ ಮನೆಯಲ್ಲೇ ಇದ್ದ ಮಹಾದೇವಿ ಹೊರಗಡೆ ಬರಲಾಗದೇ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾಳೆ. ಇದರಿಂದ ಮಹಾದೇವಿ ದೇಹ ಸಂಪೂರ್ಣ ಬೆಂದು ಹೋಗಿದೆ.
ಬಾಕಿ ಉಳಿದವರು, ಹಾಗೋ ಹೀಗೋ ಮಾಡಿ ಹೊರ ಬಂದಿದ್ದಾರೆ. ಅವರಿಗೂ ಗಾಯಗಳಾಗಿವೆ. ಅಕ್ಕಪಕ್ಕವೇ ಎರಡು ಸಿಲಿಂಡರ್ ಇದ್ದವು. ಆದರೆ ಅವುಗಳಿಂದ ಬೆಂಕಿ ಸ್ಫೋಟಗೊಂಡಿಲ್ಲ. ಇದರಿಂದ ಮತ್ತೊಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನಾ ಸಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರಿ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.