ನವದೆಹಲಿ: ಅಬಕಾರಿ ನೀತಿ ಜಾರಿ ಹಗರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ ಕೇಜ್ರವಾಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಖಲಿಸ್ತಾನಿ ಸಂಘಟನೆಗಳಿಂದ ಆಮ್ ಆದ್ಮ ಪಕ್ಷಕ್ಕೆ ಸುಮಾರು 133 ಕೋಟಿ ರೂ. (16 ದಶಲಕ್ಷ ಡಾಲರ್) ನೀಡಲಾಗಿದೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಗಂಭೀರ ಆರೋಪ ಮಾಡಿದ್ದಾನೆ.
ಈ ಆರೋಪ ಈಗ ಭಾರೀ ಸಂಚಲನ ಮೂಡಿಸಿದೆ. ಖಲಿಸ್ತಾನಿ ಗ್ರೂಪ್‌ಗಳಿಂದ ಆಮ್ ಆದ್ಮಿ ಪಕ್ಷಕ್ಕೆ 2014ರಿಂದ 2022ರ ಅವಧಿಯಲ್ಲಿ 16 ದಶಲಕ್ಷ ಡಾಲರ್ ಸಂದಾಯವಾಗಿದೆ. 1993ರ ದೆಹಲಿ ಬಾಂಬ್ ದಾಳಿಕೋರ ದೇವಿಂದರ್ ಪಾಲ್ ಸಿಂಗ್ ಭುಲ್ಲರ್‌ನನ್ನು ಬಿಡುಗಡೆಗೊಳಿಸುವ ಕುರಿತು ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು. ಅದರಂತೆ, ಅವರ ಪಕ್ಷಕ್ಕೆ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳು 133 ಕೋಟಿ ರೂಪಾಯಿ ನೀಡಿವೆ” ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ಹರಿಬಿಟ್ಟ ವಿಡಿಯೊದಲ್ಲಿ ಆರೋಪಿಸಿದ್ದಾನೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಗುರುದ್ವಾರ ರಿಚಮಂಡ್ ಹಿಲ್ಸ್‌ನಲ್ಲಿ ಅರವಿಂದ್ ಕೇಜ್ರವಾಲ್ ಹಾಗೂ ಖಲಿಸ್ತಾನ ಪರವಾಗಿರುವ ಸಿಖ್ಖರು ಸಭೆ ನಡೆಸಿದ್ದರು. ಹಣಕಾಸು ನೆರವು ನೀಡಿದರೆ 1993ರ ದಾಳಿಯ ಉಗ್ರ ದೇವಿಂದರ್ ಪಾಲ್ ಸಿಂಗ್ ಭುಲ್ಲರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ನೆರವು ನೀಡುವುದಾಗಿ ಭರವಸೆ ನೀಡಿದ್ದರು” ಎಂಬುದಾಗಿ ಗುರುಪತ್ವಂತ್ ಸಿಂಗ್ ಪನ್ನುನ್ ಆರೋಪಿಸಿದ್ದಾನೆ.


