ರಾಮೇಶ್ವರಂ ಕೆಫೆ ಸ್ಟೋರಿ ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ ಎನ್ನುವಂತೆ ದಿನದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡ್ಕೊಳ್ತಾನೇ ಇದೆ. ಈಗ ನಾವ್ ಹೇಳೊದಕ್ಕೆ ಹೊರ್ಟಿರೋ ಸ್ಟೋರಿ ಮೈಜುಂ ಅನ್ನಿಸುವಂತದ್ದು. ಕೆಫೆ ಬಾಂಬರ್ಗಳ ಖತರ್ನಾಕ್ ಪ್ಲಾನ್ ಗೆ ಎಂತ ಗಟ್ಟಿಗನಿಗೂ ನಡುಕ ಉಂಟಾಗುತ್ತೆ.
ಐಟಿ-ಬಿಟಿ ಹಬ್ ಎಂದೇ ಕರೆಯಲ್ಪಡುವ ಬೆಂಗಳೂರಿನ, ವೈಟ್ಫೀಲ್ಡ್ ನ ಐಟಿ ಕಂಪೆನಿ ಗಳನ್ನು ಗುರಿಯಾಗಿಸಿಕೊಂಡು ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು ತದನಂತರದಲ್ಲಿ ಹೈ ಸೆಕ್ಯುರಿಟಿಯನ್ನು ಚಾಣಚಕ್ಷತೆಯಿಂದ ಗಮನಿಸಿ ತಮ್ಮ ಯೋಜನೆ ಬದಲಾಯಿಸಿ ,ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲಾಯಿತ್ತೆಂದು ಎನ್ಐಎ ತನಿಖಾ ಅಧಿಕಾರಿಗಳ ಮುಂದೆ ಎಳೆ ಎಳೆಯಾಗಿ ಬಾಯ್ಬಿಟ್ಟಿದ್ದಾರೆ.
ತನಿಖಾಕಾಧಿರಿಗಳು ಇಬ್ಬರು ಉಗ್ರರನ್ನು ರಾಮೇಶ್ವರಂ ಕೆಫೆಯಲ್ಲೇ ಏಕೆ ಬಾಂಬ್ ಸ್ಫೋಟಿಸಲಾಯಿತು ಎಂದು ವಿಚಾರಣೆಗೊಳಪಡಿಸಿದಾಗ, ಮೊದಲು ವೈಟ್ಫೀಲ್ಡ್ ನಲ್ಲಿ ದೊಡ್ಡ ದೊಡ್ಡ ಐಟಿ-ಬಿಟಿ ಕಂಪೆನಿಗಳಿವೆ. ಒಂದೊಂದು ಕಂಪೆನಿಗಳಲ್ಲಿ ಸಾವಿರಾರು ಮಂದಿ ಸಾಫ್ಟ್ವೇರ್ ಎಂಜಿನಿಯರ್ಗಳು ಕೆಲಸ ಮಾಡುತ್ತಾರೆ. ಈ ಕಂಪೆನಿಗಳಲ್ಲಿ ಬಾಂಬ್ ಸ್ಫೋಟಿಸಿದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದು ಆ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೆವು.ಆದರೆ ಆ ಪ್ರದೇಶದಲ್ಲಿ ಹೈಸೆಕ್ಯುರಿಟಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾಗಳು ಇದ್ದವು. ಅಲ್ಲದೆ ಐಟಿ ಕಂಪೆನಿಯೊಳಗೆ ಹೋಗಲು ಡಿಟೆಕ್ಟರ್ ನಿಂದ ತಪಾಸಣೆ ಮಾಡಲಾಗುತ್ತದೆ. ಹಾಗಾಗಿ ತಾವು ಎಲ್ಲಿ ಸಿಕ್ಕಿಕೊಳ್ಳುತ್ತೇವೆಂಬ ಭಯದಲ್ಲಿ ಐಟಿ ಕಂಪೆನಿ ಸ್ಫೋಟಿಸುವ ಸಂಚನ್ನು ಕೈಬಿಟ್ಟೆವು.
ತದನಂತರದಲ್ಲಿ ವೈಟ್ಫೀಲ್ಡ್ ಪ್ರದೇಶದಲ್ಲೇ ಓಡಾಡಿಕೊಂಡಿದ್ದಾಗ ಈ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವುದು ಕಷ್ಟ ಎಂಬುವುದು ಗೊತ್ತಾಯಿತು. ಆದರೂ ಯಾವುದಾದರೂ ಒಂದು ಸ್ಥಳದಲ್ಲಿ ಸ್ಫೋಟಿಸಬೇಕೆಂದು ಯೋಚಿಸುತ್ತಿದ್ದಾಗ ರಾಮೇಶ್ವರಂ ಕೆಫೆ ಕಂಡು ಬಂತು.
ಈ ರಾಮೇಶ್ವರಂ ಕೆಫೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಐಟಿ-ಬಿಟಿ ಕಂಪೆನಿಗಳ ಉದ್ಯೋಗಗಳೇ ಬರುವುದು ಗಮನಿಸಿದೆವು. ಅಲ್ಲದೆ, ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಕೆಫೆ ಮುಂಭಾಗ ಅದ್ಧೂರಿ ಸಂಭ್ರಮಾಚರಣೆ ನಡೆದಿತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು ಎಂದು ಕಿರಾತಕ ಬಾಂಬರ್ಗಳು ಹೇಳಿಕೊಂಡಿದ್ದಾರೆ.
ಮುಖ್ಯವಾದ ವಿಚಾರವೆಂದರೇ, ರಾಮೇಶ್ವರಂ ಕೆಫೆಯೊಳಗೆ ಹೋಗಲು ಯಾವುದೇ ಸೆಕ್ಯುರಿಟಿಯಾಗಲೀ, ಮೆಟಲ್ ಡಿಟೆಕ್ಟರ್ ಕೂಡ ಇಲ್ಲದಿರುವುದನ್ನು ಗಮನಿಸಿ ಸುಲಭವಾಗಿ ಕೆಫೆಯೊಳಗೆ ಹೋಗಬಹುದೆಂದು ನಿರ್ಧರಿಸಿ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸುವ ನಿರ್ಧಾರಕ್ಕೆ ಬಂದಿದ್ದಾಗಿ ಉಗ್ರ ಮುಸಾವೀರ್ ಹುಸೇನ್ ಹಾಗೂ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಹಾ ವಿಚಾರಣೆ ಸಂದರ್ಭದಲ್ಲಿ ಎನ್ಐಎ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಈ ಇಬ್ಬರ ಹೆಚ್ಚಿನ ಮಾಹಿತಿಗಳನ್ನು ಎನ್ಐಎ ಕಲೆ ಹಾಕುತ್ತಿದ್ದು, ಉಗ್ರರನ್ನು ಇನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿದೆ.