ಚಿತ್ರದುರ್ಗ : ಗಂಡ ಸರ್ಕಾರಿ ನೌಕರನಾಗಿದ್ದರೂ, ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಜೂಜಾಡಿ ಮೈತುಂಬಾ ಸಾಲ ಮಾಡಿಕೊಂಡಿದ್ದ. ಸಾಲಗಾರರು ಮನೆಯ ಬಳಿ ಬಂದು ಸಾಲಕ್ಕಾಗಿ ಪೀಡಿಸುತ್ತಾ ಗಂಡ-ಹೆಂಡತಿ ಇಬ್ಬರಿಗೂ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಗೃಹಿಣಿ ರಂಜಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹೊಳಲ್ಕೆರೆಯ ಬಸವ ಲೇಔಟ್ನ ಮನೆಯಲ್ಲಿ ರಂಜಿತಾ (23) ನೇಣಿಗೆ ಶರಣಾಗಿದ್ದಾಳೆ. ಈಕೆಯ ಪತಿ ದರ್ಶನ್ ಹೊಸದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ (ಎಇ) ಆಗಿ ಕೆಲಸ ಮಾಡುತ್ತಿದ್ದ.
ದರ್ಶನ್ ಕೆಲಸಕ್ಕೆ ಹೋದ ವೇಳೆ ಸಾಲಗಾರರು ಬಂದು ಮನೆಯ ಬಳಿ ಕಾಯುತ್ತಾ ಕುಳಿತಿರುತ್ತಿದ್ದರು. ಸಾಲಗಾರರ ಕಿರುಕುಳಕ್ಕೆ ಹಾಗೂ ಗಂಡನ ನಡೆಗೆ ಬೇಸತ್ತಿದ್ದ ರಂಜಿತಾ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎಂದು ಕೇಳಿಬಂದಿದೆ. ಗೃಹಿಣಿಯ ತಂದೆ ವೆಂಕಟೇಶ್ ಅವರು ಬೆಟ್ಟಿಂಗ್ ದಂಧೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ.