ಬೆಂಗಳೂರು : ನಗರದಲ್ಲಿ ಭಾನುವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಇಬ್ಬರು ಬೈಕ್ ಸವಾರರನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿವಾಳ-ಕೋರಮಂಗಲ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿ ಇಬ್ಬರು ಬೈಕ್ ಸವಾರರು ಕಿರುಕುಳ ನೀಡಿದ್ದಾರೆ.
ತೇಜಸ್ ಮತ್ತು ಜಗನ್ನಾಥ್ ಬಂಧಿತ ಆರೋಪಿಗಳು. ಮೂರನೇ ಆರೋಪಿ ಕಣ್ಣನ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿವಾಳ, ಸೆಂಟ್ ಜಾನ್ಸ್ ನಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಸಹಾಯಕ್ಕಾಗಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಪರಾರಿಯಾಗಿದ್ದಾರೆ.
ಘಟನೆಯ ವಿಡಿಯೋ ಮತ್ತು ದುಷ್ಕರ್ಮಿಗಳ ವಾಹನ ಸಂಖ್ಯೆಯನ್ನು ಸಹ ಯುವತಿ ತಮಗೆ ನೀಡಿದ್ದರಿಂದ ಆರೋಪಿಗಳನ್ನು ಪತ್ತೆಹಚ್ಚಲು ಸಹಾಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.