ಬೆಂಗಳೂರು : ಪ್ರಿಯಕರನ ಜೊತೆಗೂಡಿ ಯುವತಿ ಒಂದು ಕೋಟಿ ರೂ. ಹಣ ಕದ್ದ ಆರೋಪ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯತಮನ ಜೊತೆಗೂಡಿ ಮನೆಯಲ್ಲಿದ್ದ ಹಣವನ್ನ ಕಳ್ಳತನ ಮಾಡಿ ಮದುವೆಯಾಗಿರುವ ಬಗ್ಗೆ ಯುವತಿ ತಂದೆ ಬಟ್ಟೆ ವ್ಯಾಪಾರ ಮಾಡುವ ಉದ್ಯಮಿ ಶರವಣನ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಕಳೆದ ಎಪ್ರಿಲ್ 21 ನೇ ತಾರೀಖಿನಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಯುವತಿ ಕಣ್ಮರೆಯಾಗಿದ್ದ ಹಿನ್ನಲೆ ಪೋಷಕರು ಹುಡುಕಾಟ ನಡೆಸಿದ್ದಾರೆ. ಆ ಬಳಿಕ ಯುವತಿ ಪ್ರಿಯಕರನ ಜೊತೆಗೂಡಿ ಹೋಗಿದ್ದ ಮಾಹಿತಿ ತಿಳಿದು ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಆಗ ಯುವತಿ ಮದುವೆಯಾಗಿದ್ದು, ಪೋಷಕರ ಜೊತೆ ಬರೋದಿಲ್ಲವೆಂದು ಪೊಲೀಸರ ಮುಂದೆ ಹೇಳಿದ್ದಾಳೆ. ಇದಾದ ಒಂದು ವಾರದ ಬಳಿಕ ಮನೆಯಲ್ಲಿನ ಲಾಕರ್ ಪರಿಶೀಲಿಸಿದಾಗ ಒಂದು ಕೋಟಿ ನಗದು ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ನಿವೇಶನ ಖರೀದಿಗೆ ಈ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಇದ್ದು, ಸದ್ಯ ಕಳ್ಳತನ ಮಾಡಿದ ಆರೋಪದ ಮೇಲೆ ಮಗಳ ವಿರುದ್ದ ಕ್ರಮಕ್ಕೆ ತಂದೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿದ್ದಾರೆ.