ಬೆಂಗಳೂರು : ಚಿತ್ರದುರ್ಗ ಮೂಲದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಟ ದರ್ಶನ್‌ಗೆ 6 ದಿನಗಳ ಪೊಲೀಸ್ ವಶಕ್ಕೆ ನೀಡಿ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಮೊಬೈಲ್ ಸಂದೇಶ ಕಳುಹಿಸಿ ತೊಂದರೆ ಮಾಡಿದ ಎಂಬ ಕಾರಣಕ್ಕೆ ಅಭಿಮಾನಿ ರೇಣುಕಾಸ್ವಾಮಿ ಅವರನ್ನು ದರ್ಶನ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ನಟ ಸೇರಿದಂತೆ 13 ಮಂದಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧನ ಮಾಡಿದ್ದರು. ಸದ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಎಲ್ಲಾ ಆರೋಪಿಗಳಿಗೆ ನ್ಯಾಯಾಲಯವು 6 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಈ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಎ 1 ಹಾಗೂ ನಟ ದರ್ಶನ್ ಎ 2, ಪವನ್ ಎಂಬ ಸಹಚರ ಎ 3 ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆ ತನಿಖೆ ಅನಿವಾರ್ಯವಾಗಿದ್ದ ಕಾರಣ 6 ದಿನ ಪೊಲೀಸರ ವಶಕ್ಕೆ ನ್ಯಾಯಾಲಯವು ನೀಡಿದೆ.
ಮಂಗಳವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ನ್ಯಾಯಾಧೀಶಕರು ನಟನನ್ನು ಹಲವು ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನು ಎಷ್ಟು ಗಂಟೆಗೆ, ಎಲ್ಲಿ ಬಂಧಿಸಲಾಯಿತು ಎಂದು ಕೇಳಿದ್ದಾರೆ. ಮಧ್ಯಾಹ್ನ 2.30ಕ್ಕೆ ಪೊಲೀಸ್ ಠಾಣೆಯಲ್ಲಿ ಬಂಧಿಸಿದರು ಎಂದು ದರ್ಶನ್ ಉತ್ತರಿಸಿದರು. ಅಂತೆಯೇ ಮಧ್ಯಾಹ್ನ 3 ಗಂಟೆಗೆ ಬಂಧಿಸಿದ್ದಾರೆಂದು ಪವಿತ್ರಾ ಗೌಡ ಹೇಳಿದರು. ಜತೆಗೆ ಪೊಲೀಸರು ನಮಗೆ ತೊಂದರೆ ಕೊಟ್ಟಿಲ್ಲ ಎಂದು ಕೂಡ ಉತ್ತರಿಸಿದರು. ವಕೀಲರನ್ನು ನೇಮಿಸಿಕೊಳ್ಳುತ್ತೀರಾ ಎಂದು ನ್ಯಾಯಾಧೀಶರು ಕೇಳಿದ್ದಕ್ಕೆ ಹೌದು ಎಂದು ಉತ್ತರ ನೀಡಿದ್ದಾರೆ.