ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದಲ್ಲಿ ಬಿಜೆಪಿಯ ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣವನ್ನು ಚುನಾವಣೆ ಆಯೋಗ ಜಪ್ತಿ ಮಾಡಿದ್ದು, ಇದು ಬಿಜೆಪಿ ಎಲೆಕ್ಟೊರಲ್ ಬಾಂಡ್ ರೂಪದಲ್ಲಿ ಕೊಳ್ಳೆ ಹೊಡೆದ ಪಾಪದ ಹಣವಾಗಿದೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ಈ ಹಣವನ್ನು ಪ್ರಧಾನಿಯ ಬೆಂಗಳೂರು ಕಾರ್ಯಕ್ರಮಕ್ಕೆ ಜನ ಸೇರಿಸಲು ಬಳಸುವ ಉದ್ದೇಶದಿಂದ ಸಾಗಿಸುತ್ತಿದ್ದಾರೆ? ಎಂದು ರಾಮಲಿಂಗಾರೆಡ್ಡಿ ಟ್ವೀಟ್ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ .ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಚುನಾವಣೆ ನಡೆಸುವುದು, ಬಹುಮತ ಬರದಿದ್ದಾಗ ನೂರಾರು ಕೋಟಿ ಹಣ ಹಾಕಿ ಶಾಸಕರು, ಸಂಸದರನ್ನು ಖರೀದಿಸುವುದು ಬಿಜೆಪಿ ಜಾಯಮಾನ ಈಗ ಅವರ ಹಣವಂತೂ ಹೋಗಿದೆ, ಮಾನವನ್ನಾದರೂ ಉಳಿಸಿಕೊಳ್ಳಬೇಕು ಎನ್ನುವ ಕಾರಣದಿಂದ ಕಾಂಗ್ರೆಸ್ ಮೇಲೆ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ.
ಈ ಬಾರಿಯ ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭಯ ಉಂಟಾಗಿದ್ದು, ಲೂಟಿ ಮಾಡಿದ ಹಣವನ್ನೆಲ್ಲ ಖರ್ಚು ಮಾಡಿಯಾದರೂ ಶತಾಯಗತಾಯ ಗೆಲ್ಲಬೇಕು ಎಂದು ಅವರ ತಂಡ ಹೊರಟಿರುವಂತಿದೆ ಎಂದು ರಾಮಲಿಂಗಾರೆಡ್ಡಿ ವಾಕ್ ಪ್ರಹಾರ ನಡೆಸಿದ್ದಾರೆ.ನಾವು ಜನ ಬಲವನ್ನು ನಂಬಿದವರು, ಬಿಜೆಪಿಯಂತೆ ಹಣ ಬಲವನ್ನಲ್ಲ ಎಂದು ರಾಮಲಿಂಗಾರೆಡ್ಡಿ ಬಿಜೆಪಿ ಆರೋಪಗಳಿಗೆ ಖಡಕ್ ಪ್ರತ್ಯುತ್ತರ ನೀಡಿದ್ದಾರೆ