ಆನೆಕಲ್ : ರಸ್ತೆಗೆ ಅಡ್ಡ ಇದ್ದ ಲಾರಿಯನ್ನು ತೆಗೆಯಬೇಕು ಎಂದು ಹೇಳಿದ್ದ ಕಾರಣಕ್ಕೆ ಯುವಕರ ಮೇಲೆ ಚಾಕುವಿನಿಂದ ಇರಿದು ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಹೀಲಲಿಗೆ ಕ್ರಾಸ್ ಬಳಿ ನಡೆದಿದೆ.ಶನಿವಾರ ರಾತ್ರಿ ಘಟನೆ ನಡೆದಿದ್ದು ಅಂಕಿತ್ ಎಂಬ ಯುವಕ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ನಿಂತಿದ್ದ ಲಾರಿ ಚಾಲಕನಿಗೆ ಪಕ್ಕಕ್ಕೆ ತೆಗೆಯುವಂತೆ ಅಂಕಿತ್ ಹೇಳಿದ್ದ ಇದೇ ಸಂದರ್ಭದಲ್ಲಿ ಶ್ರೀಧರ್ ಎಂಬಾತ ಟಿಟಿಯಲ್ಲಿ ಬಂದಿದ್ದ, ಲಾರಿ ಪಕ್ಕಕ್ಕೆ ತೆಗಿ ಎಂದು ಹೇಳಿದ ಅಂಕಿತ್ನ ಮೇಲೆ ಏಕಾಏಕಿ ಶ್ರೀಧರ್ ಹಲ್ಲೆ ಮಾಡಿದ್ದಾನೆ.
ಶ್ರೀಧರ್ ಹಲ್ಲೆ ಮಾಡುತ್ತಿದ್ದಂತೆ ಅಂಕಿತ್ ತನ್ನ ಮಾಲೀಕ ಸುನಿಲ್ ಅವರಿಗೆ ಕರೆ ಮಾಡಿದ್ದಾನೆ ಸುನಿಲ್ ಹಾಗೂ ಕಾರ್ತಿಕ್ ಸ್ಥಳಕ್ಕೆ ಬಂದು ಶ್ರೀಧರ್ ಮೇಲೆ ಯಾಕೆ ಹಲ್ಲೆ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಿದ್ದಂತೆ, ಸ್ಥಳಕ್ಕೆ ಬಂದ ಕಿಶೋರ್ ಮಾಲೆ ಮಂಜ ಹೇಮಂತ್, ಮನೋಜ್, ತುಕಡಿ ವೆಂಕಟರಾಜು ಶ್ರೀಧರ್ ಜೊತೆ ಸೇರಿ ಸುನಿಲ್ ಹಾಗೂ ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದು ಇಬ್ಬರ ಮೇಲೆಯೂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ಸುನಿಲ್ ಹಾಗೂ ಕಾರ್ತಿಕ್ನನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯಿಂದಾಗಿ ಆಸ್ಪತ್ರೆಯ ಬಳಿ ಸುನಿಲ್ ಹಾಗೂ ಕಾರ್ತಿಕ್ ಕುಟುಂಬಸ್ಥರು ಜಮಾಯಿಸಿದ್ದು ಸ್ಥಳಕ್ಕೆ ಸೂರ್ಯನ ನಗರ ಪೊಲೀಸರು ಆಗಮಿಸಿ ಆಸ್ಪತ್ರೆ ಬಳಿ ಇದ್ದವರನ್ನು ಕಳುಹಿಸಿದ್ದಾರೆ.
ಆನೇಕಲ್ ಸುತ್ತಮುತ್ತ ದಿನದಿಂದ ದಿನಕ್ಕೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು ಹಲ್ಲೆ ಮಾಡಿದ ಯುವಕರ ತಂಡದಲ್ಲಿದ್ದವರು ಕೆಲವರು ರೌಡಿಶೀಟರ್ಗಳಾಗಿದ್ದು ಇನ್ನೂ ಕೆಲವರು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದರು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬಂಧನಕ್ಕಾಗಿ ಸೂರ್ಯನಗರ ಪೊಲೀಸರು ಬಲೆ ಬೀಸಿದ್ದು, ಸಣ್ಣ ಕಾರಣಕ್ಕಾಗಿ ನಡು ರಸ್ತೆಯಲ್ಲಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಗುಂಪಿನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಅಮಾಯಕರ ಮೇಲೆ ಈ ರೀತಿ ತೊಂದರೆಯಾಗಬಾರದು ಎಂದು ಸುನಿಲ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.