ಯಾದಗಿರಿ: ಸರಳ, ಸಜ್ಜನ, ಹಿರಿಯ ಮುತ್ಸದ್ಧಿ ರಾಜಕಾರಣಿಯಾಗಿದ್ದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಾಲ್ಕನೇ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಕಾಲಿಟ್ಟಿದ್ದರು. ಅವರ ಹಿರಿತನಕ್ಕೆ ಇತ್ತಿಚಿಗಷ್ಟೇ ಉಗ್ರಾಣ ನಿಗಮ ಮಂಡಳಿ ಅಧ್ಯಕ್ಷ ಗಾದಿಯೂ ಒಲಿದು ಬಂದಿತ್ತು. ಅವರು ಅಧಿಕಾರ ವಹಿಸಿಕೊಂಡು 21 ದಿನಗಳೂ ಕಳೆದಿಲ್ಲ. ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಅವ್ರ ಅಕಾಲಿಕ ನಿಧನದಿಂದ ರಾಜಕೀಯ ವಲಯ ಸೇರಿದಂತೆ ಕುಟುಂಬ ವರ್ಗ, ಅಭಿಮಾನಿಗಳು ಹಾಗೂ ಕ್ಷೇತ್ರದಾದ್ಯಂತ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಯಾದಗಿರಿ ಜಿಲ್ಲೆಯ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ (67) ಅವರ ಸಾವನ್ನಪ್ಪಿರುವ ಸುದ್ದಿ ಬರ ಸಿಡಿಲಿನಂತೆ ಬರುತ್ತಿದ್ದಂತೆಯೇ ಸುರಪುರ ಪಟ್ಟಣದಲ್ಲಿ ನೀರವ ಮೌನ ಆವರಿಸಿ ಸ್ವಯಂ ಪ್ರೇರಿತವಾಗಿ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿ ನೆಚ್ಚಿನ ನಾಯಕನ ಅಗಲಿಕೆಗೆ ಕಂಬನಿ ಮಿಡಿಯಿತು.
ಇನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಮೂಲತಃ ರಾಜ ಮನೆತನದವರಾಗಿದ್ರು. ಅವ್ರ ತಂದೆ ಬಳುವಳಿಯಿಂದ ರಾಜಕೀಯಕ್ಕೆ ಬಂದ್ರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ್ರ ಅತ್ಯಾಪ್ತರಾಗಿದ್ದ ವೆಂಕಟಪ್ಪ ನಾಯಕ ಅವರು ಖರ್ಗೆ ಅವ್ರ ಮಾರ್ಗದರ್ಶನದಲ್ಲಿ ಬೆಳೆದು, ಖರ್ಗೆ ಅವರಂತೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿಯೇ ಕೊನೆವರೆಗೆ ಉಳಿದ್ರು. ಇನ್ನು ರಾಜಾ ವೆಂಕಟಪ್ಪ ನಾಯಕ ನೇರ ನುಡಿಗೆ ಹೆಸರುವಾಸಿಯಾಗಿದ್ರು.
ಸುರಪುರ ನಗರದ ಪ್ರಭು ಕಾಲೇಜು ಆವರಣದಲ್ಲಿ ಶಾಸಕ ವೆಂಕಟಪ್ಪ ನಾಯಕರ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಘಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನ ನಡೆಯಿತು. ಅಂತಿಮ ದರ್ಶನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಬಿ. ನಾಗೇಂದ್ರ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಸಂಸದ ರಾಜಾ ಅಮರೇಶ್ವರ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ, ಮಾಜಿ ಶಾಸಕ ಕೆ. ಶಿವನಗೌಡ ನಾಯಕ ಸೇರಿದಂತೆ ಹಲವಾರು ಶಾಸಕರು, ಗಣ್ಯ ಮಾನ್ಯರು ಭಾಗವಹಿಸಿ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಿದರು.
ಪ್ರಭು ಕಾಲೇಜ್ ಆವರಣದಲ್ಲಿ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಅಂತಿಮವಾಗಿ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಪೊಲೀಸ್ ಇಲಾಖೆಯಿಂದ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಕೆ ಮಾಡಿದರು.