ವಿಜಯಪುರ : ರಾಜ್ಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಚರ್ಚೆಗೆ ಬಂದಿದೆ , ಮನೆಗಳ್ಳತನ ಮಾಡುವ ನಟೋರಿಯಸ್ ಇಂಟರ್ ಸ್ಟೇಟ್ ಚಡ್ಡಿ ಗ್ಯಾಂಗ್ ವಿಜಯಪುರ ನಗರದಲ್ಲಿ ಪ್ರತ್ಯಕ್ಷಗೊಂಡು ಭಾರಿ ಆತಂಕ ಸೃಷ್ಟಿಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಮುನ್ನಲೆಗೆ ಬಂದಿದ್ದು, ಮನೆಗಳ್ಳತನ ಮಾಡುವ ಅಂತಾರಾಜ್ಯ ಚಡ್ಡಿ ಗ್ಯಾಂಗ್ ವಿಜಯಪುರ ನಗರದಲ್ಲಿ ಕಾಣಿಸಿಕೊಂಡಿದೆ.
ಮುಖದ ಗುರುತು ಸಿಗಬಾರ್ದು ಅನ್ನೋ ಕಾರಣಕ್ಕೆ ಮಂಕಿ ಕ್ಯಾಪ್, ಬನಿಯನ್ ಮತ್ತು ಚಡ್ಡಿ ತೊಟ್ಟು ತಡರಾತ್ರಿ ಮನೆಗಳ್ಳತನ ಮಾಡುವ ಐದಾರು ನಟೋರಿಯಸ್ ಗ್ಯಾಂಗ್ ಕಾಣಿಸಿಕೊಂಡಿದ್ದು, ಗುಮ್ಮಟ ನಗರದ ಮನೆಯೊಂದಕ್ಕೆ ಚಡ್ಡಿ ಗ್ಯಾಂಗ್ ಎಂಟ್ರಿ ಕೊಡುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಚಡ್ಡಿ ಗ್ಯಾಂಗ್ ಬಗ್ಗೆ ವಿಜಯಪುರ ನಗರದಾದ್ಯಂತ ಅನೌನ್ಸ್ ಮೆಂಟ್ ಮಾಡಿದ್ದು ಬಡಾವಣೆಗಳಲ್ಲಿ ಚಡ್ಡಿ ಗ್ಯಾಂಗ್ ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ .
ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿರುವ ಈ ಚಡ್ಡಿ ಗ್ಯಾಂಗ್ ವೇಗ ಹೆಚ್ಚಿಸಿಕೊಳ್ಳಲು ಚಡ್ಡಿಯನ್ನ ಧರಿಸಿರುತ್ತಾರೆ. ಸಿಕ್ಕಲಿ ಬೀಳೋ ಸಾಧ್ಯತೆ ಇದ್ದರೆ ತಪ್ಪಿಸಿಕೊಂಡು ಓಡಿ ಹೋಗಲು ಚಡ್ಡಿ ಮತ್ತು ಬನಿಯನ್ ಬಳಸುತ್ತಾರೆ ಎಂದು ಪೊಲೀಸ್ ವರದಿಗಳು ತಿಳಿಸಿವೆ. ಈ ಚಡ್ಡಿ ಗ್ಯಾಂಗ್ ಚಡ್ಡಿ, ಬನಿಯಾನ್, ಮಾಸ್ಕ್ ಮಾತ್ರ ಧರಿಸಿ ಮನೆಗೆ ನುಗ್ಗುತ್ತಾರೆ. ಚಡ್ಡಿ ಗ್ಯಾಂಗ್ನಲ್ಲಿ 5 ರಿಂದ 8 ಜನರು ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುತ್ತಾರೆ.ಕದಿಯೋ ಮೊದಲೇ ಪ್ಲಾನ್ ರೂಪಿಸಿಕೊಂಡು ತಂಡದ ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ನಿಭಾಯಿಸ್ತಿದ್ರು ಎಂದು ಹೇಳಲಾಗ್ತಿದೆ.
ದೂರದೂರಿಗೆ ತೆರಳುವಾಗ ಬಂಗಾರ , ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ಸುರಕ್ಷಿತವಾಗಿ ಬ್ಯಾಂಕ್ ಲಾಕರ್ ಅಥವಾ ಸುರಕ್ಷಿತವಾಗಿ ಇಡಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಚಡ್ಡಿ ಗ್ಯಾಂಗ್ ವೇಷಭೂಷಣದಂತೆ ಯಾರಾದರೂ ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಲು ಸೂಚನೆ ನೀಡಲಾಗಿದೆ. ನಗರದ ಗಲ್ಲಿ ಗಲ್ಲಿಯಲ್ಲಿ ಅಟೋ ಮೂಲಕ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. 9480804200 ಅಥವಾ 112 ಗೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ. ಇನ್ನು ಚಡ್ಡಿ ಗ್ಯಾಂಗ್ ವಿಚಾರದಿಂದ ಜನರು ಭಯಭೀತರಾಗುವ ಅವಶ್ಯಕತೆಯಿಲ್ಲ ಪೊಲೀಸ್ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಿದೆ ಎಂದು ಇಲಾಖೆ ತಿಳಿಸಿದೆ.