ವಿಜಯಪುರ : ಗ್ರಾಮದಲ್ಲಿ ತಡರಾತ್ರಿ ಮೊಸಳೆ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಭಯಭೀತಿ ಸೃಷ್ಟಿಸಿದ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲ್ಲೂಕಿನ ಗರಸಂಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಜರುಗಿದೆ.

ಗರಸಂಗಿ ಗ್ರಾಮದ ಪಕ್ಕದಲ್ಲಿರುವ ಕೆರೆಯಿಂದ ರಾತ್ರಿ 10 ಗಂಟೆ ಸುಮಾರಿಗೆ ಗ್ರಾಮದಲ್ಲಿ ಪತ್ಯಕ್ಷಗೊಂಡ ಮೊಸಳೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತು. ತದನಂತರ ಗ್ರಾಮಸ್ಥರು ಹರಸಾಹಸಪಟ್ಟು ಮೊಸಳೆಯನ್ನು ಹಿಡಿದು ಕಟ್ಟಿ ಹಾಕಿದರು. ಗ್ರಾಮಕ್ಕೆ ಮೊಸಳೆ ನುಗ್ಗಿರುವ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಎರಡ್ಮೂರು ಗಂಟೆಗಳ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಮೊಸಳೆಯನ್ನು ಕೃಷ್ಣಾ ನದಿಯಲ್ಲಿ ಬಿಡಲಾಯಿತು.
ಏಳೆಂಟು ಬಾರಿ ಬಂದಿದ್ದ ಮೊಸಳೆ:
ಕೊಲ್ಹಾರ ತಾಲ್ಲೂಕಿನ ಗರಸಂಗಿ, ರೋಣಿಹಾಳ ಗ್ರಾಮಗಳ ಕರೆಗಳಲ್ಲಿ ನೂರಾರು ಮೊಸಳೆಗಳಿವೆ. ಈ ಹಿಂದೆ ಏಳೆಂಟು ಬಾರಿ ಗ್ರಾಮಗಳಲ್ಲಿ ಮೊಸಳೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಅಲ್ಲದೇ ಬೃಹತ್ ಕೆರೆಗಳ ಸುತ್ತಮುತ್ತಲಿನ ಜಮೀನುಗಳ ರೈತರು ರಾತ್ರಿ ಬೆಳೆಗಳಿಗೆ ನೀರು ಬಿಡಲು ಹೋಗುವಾಗಲೂ ರಸ್ತೆಯಲ್ಲಿ ದಂಡೆಗಳಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ರೈತರು ರಾತ್ರಿ ಹೊತ್ತು ಜೀವಭಯದಲ್ಲೇ ತಮ್ಮ ಹೊಲಗಳಿಗೆ ಹೋಗಿ ನೀರು ಹಾಯಿಸಬೇಕಾದ ಅನಿರ್ವಾಯತೆ ಇದೆ. ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರು ಹಾಗೂ ರೈತರ ಸುರಕ್ಷತಾ ದೃಷ್ಟಿಯಿಂದ ಕೆರೆಯಲ್ಲಿರುವ ಮೊಸಳೆಗಳನ್ನು ಹಿಡಿದು ನದಿಗೆ ಬಿಡುವ ಅಥವಾ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಗರಸಂಗಿ ಗ್ರಾಮಸ್ಥರ ಒತ್ತಾಯವಾಗಿದೆ.


