ವಿಜಯನಗರ : ನಿಧಿ ಇರಬಹುದು ಎಂಬ ಆಸೆಗೆ ಖದೀಮರು ದೇವಸ್ಥಾನದ ಗರ್ಭ ಗುಡಿಗೆ ಕನ್ನ ಹಾಕಿರುವ ವಿದ್ಯಮಾನ ವಿಜಯನಗರದ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದೆ.
ನಿಧಿಗಾಗಿ ಪುರಾತನ ಕಾಲದ ದೇವಸ್ಥಾನಕ್ಕೆ ರಾತ್ರೋರಾತ್ರಿ ಬಂದ ಚೋರರು ಜೆಸಿಬಿ ಮೂಲಕ ದೇಗುಲ ಗರ್ಭಗುಡಿಯನ್ನು ಅಗೆದಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಭೀರಪ್ಪ ದೇವಸ್ಥಾನದಲ್ಲಿ ಸುಮಾರು ಹತ್ತು ಅಡಿಗಳಷ್ಟು ಮಣ್ಣು ಅಗೆದಿದ್ದಾರೆ. ಪುರಾತನ ದೇವಸ್ಥಾನ ಎಂಬ ಕಾರಣಕ್ಕೆ ಕೆಳಗೆ ನಿಧಿ ಇರಲೇಬೇಕೆಂದು ಅಂದುಕೊಂಡಿರುವ ದುಷ್ಕರ್ಮಿಗಳು ಬುಧವಾರ ಮಧ್ಯ ರಾತ್ರಿ ನಂತರ ದೇಗುಲಕ್ಕೆ ನುಗ್ಗಿದ್ದಾರೆ. ದೇವಸ್ಥಾನದ ಮುಂಭಾಗ ಮಣ್ಣು ಅಗೆದು ಕೊನೆಗೆ ನಿಧಿ ಸಿಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಜಮೀನಿನಲ್ಲಿರುವ ಈ ದೇವಸ್ಥಾನದಲ್ಲಿ ಈ ಹಿಂದೆಯೂ ನಿಧಿಗಾಗಿ ಅಗೆಯಲಾಗಿತ್ತು. ಇದೇ ಜಾಗದಲ್ಲಿ ನಿಧಿಗಾಗಿ ದೇವಸ್ಥಾನ ಮುಂಭಾಗದ ಕಲ್ಲು ಕಿತ್ತು ಹಾಕಿದ್ದರು. ಆದರೆ, ಯಾರು ಮಾಡಿದ್ದಾರೆ? ಎಲ್ಲಿಂದ ಬಂದವರು ಮಾಡಿದ್ದಾರೆ? ಸ್ಥಳೀಯರೋ? ಅಥವಾ ಬೇರೆ ಕಡೆಯವರೋ? ಎಂಬಿತ್ಯಾದಿ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಈ ಪುರಾತನ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ದುಷ್ಕರ್ಮಿಗಳು ಹೊಂಚು ಹಾಕಿ ಗರ್ಭ ಗುಡಿ ಮುಂದೆ ಅಗೆದು ನಿಧಿ ಶೋಧಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ನಿಧಿಗಾಗಿ ಅಗೆದ ಸ್ಥಳದಲ್ಲಿ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಮಣ್ಣು ಅಗೆದ ಸ್ಥಳದಲ್ಲಿ ನಿಂಬೆಹಣ್ಣು, ಕುಂಕುಮ ಇನ್ನಿತರ ಸಾಮಾಗ್ರಿ ಪತ್ತೆಯಾಗಿದೆ.
ದೇವಸ್ಥಾನದ ಅರ್ಚಕರು ಬೆಳಗ್ಗೆ ಪೂಜೆಗೆಂದು ಬಂದಾಗ ಕಳ್ಳರ ಕೃತ್ಯ ಬಯಲಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿಧಿಗಾಗಿ ದೇವಸ್ಥಾನ ಅಗೆದ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಪುರಾತನ ಕಾಲದ ದೇಗುಲವನ್ನು ಅಗೆದು ಧ್ವಂಸ ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ಪಟ್ಟು ಹಿಡಿದರು.