ಶಿವಮೊಗ್ಗ : ರಸ್ತೆ ಕಾಮಗಾರಿಯಲ್ಲಿ ಮರಗಳನ್ನು ರಸ್ತೆ ಮಧ್ಯೆದಲ್ಲಿಯೇ ಬಿಟ್ಟು ಡಾಂಬರೀಕರಣ ಮಾಡಲಾಗಿದೆ. ಕಾಮಗಾರಿಯ ಗುತ್ತಿಗೆದಾರರ ಎಡವಟ್ಟಿಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಶಿವಮೊಗ್ಗ, ಸಾಗರದ ಬಟ್ಟೆಮಲ್ಲಪ್ಪದ ಬಳಿ ರಸ್ತೆಗಳಲ್ಲಿ ಮರಗಳನ್ನು ಬಿಟ್ಟು, ಅದರ ಸುತ್ತಲೂ ಡಾಂಬರು ಹಾಕಲಾಗಿದೆ.
ರಾಣೇಬೆನ್ನೂರು-ಬೈಂದೂರು ಹೆದ್ದಾರಿ 766Cಯಲ್ಲಿ ಈ ಕಾಮಗಾರಿ ನಡೆಯುತ್ತಿದೆ.ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರಿಗೆ ಪ್ರತಿಷ್ಠೆಯ ಯೋಜನೆ ಇದಾಗಿದೆ. ಶಿವಮೊಗ್ಗ ಲೋಕಸಭೆ ಕೊನೆಯ ಕ್ಷೇತ್ರ ಉಡುಪಿಯ ಬೈಂದೂರಿಗೆ ಸಂಪರ್ಕವನ್ನು ಈ ರಸ್ತೆ ಕಲ್ಪಿಸುತ್ತದೆ.ಸುಮಾರು 250 ಕೋಟಿ ರೂಪಾಯಿಯ ಈ ಯೋಜನೆಗೆ 2022ರಲ್ಲಿ ಚಾಲನೆ ನೀಡಲಾಗಿತ್ತು. ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ನೀಡದ ಹಿನ್ನೆಲೆ, ಈ ರೀತಿಯ ಕಾಮಗಾರಿ ನಡೆಸಲಾಗಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಬರುವ ಮುನ್ನವೇ ಮುಗಿಸುವ ತರಾತುರಿಯಲ್ಲಿ ಈ ರೀತಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಮತ್ತೊಂದೆಡೆ ಅರಣ್ಯ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ ಎನ್ನಲಾಗಿದೆ..ಇನ್ನು ಹೆದ್ದಾರಿ ಅಧಿಕಾರಿಗಳ ಕ್ರಮಕ್ಕೆ ಪರಿಸರಾಸಕ್ತರು ಅಸಮಾಧಾನ ಹೊರ ಹಾಕಿದ್ದಾರೆ.ನಿವೃತ್ತ ಅಧಿಕಾರಿ ಪೀರ್ಪಾಷಾ ಎಂಬವರಿಗೆ ರಸ್ತೆ ಕಾಮಗಾರಿಯ ಉಸ್ತುವಾರಿಯನ್ನು ಸಂಸದ ರಾಘವೇಂದ್ರ ಅವರೇ ನೀಡಿದ್ದಾರೆ. ಪೀರ್ ಪಾಷಾ ಓರ್ವ ಭ್ರಷ್ಟ ಅಧಿಕಾರಿ, ವಿವೇಚನಾರಹಿತ ಕಾಮಗಾರಿಗಳಿಂದಲೇ ಹಣ ಲೂಟಿ ಮಾಡ್ತಾರೆ ಎಂದು ಅಖಿಲೇಷ್ ಚಿಪ್ಲಿ ಆರೋಪಿಸಿದ್ದಾರೆ.