ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಬೆಳಗ್ಗೆಯಿಂದ ಗಾಂಧಿ ಬಜಾರ್‌ನಲ್ಲಿ ಸಹಸ್ರಾರು ಭಕ್ತರು ಮಾರಿಕಾಂಬ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದ್ದಾರೆ.
ತವರು ಮನೆ ಗಾಂಧಿ ಬಜಾರ್‌ನಲ್ಲಿ ಮಂಟಪ ನಿರ್ಮಿಸಿ ಶ್ರೀ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಥಮ ಪೂಜೆಗೂ ಮುನ್ನ ಪರದೆ ಸರಿಸಲಾಯಿತು. ಈ ಸಂದರ್ಭ ಭಕ್ತರು ಘೋಷಣೆಗಳನ್ನು ಮೊಳಗಿಸಿದರು.
ತಾಯಿಯ ತವರು ಗಾಂಧಿ ಬಜಾರ್‌ನಲ್ಲಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂದಿದೆ. ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಾರಿಕಾಂಬ ದೇವಿಯ ದರ್ಶನ ಪಡೆಯಲು ಜಿಲ್ಲೆಯ ಗಣ್ಯರು ಆಗಮಿಸುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ದೇವಿಯ ದರ್ಶನ ಪಡೆದರು. ಇದೇ ವೇಳೆ ಸರತಿಯಲ್ಲಿ ನಿಂತಿದ್ದ ಜನರು ಸಂದರ ರಾಘವೇಂದ್ರ ಅವರಿ ಹಸ್ತಲಾಘವ ಮಾಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಬಿಸಿಲಿನ ಝಳ ಹೆಚ್ಚಿರುವುದರಿಂದ ಅಲ್ಲಲ್ಲಿ ಮಜ್ಜಿಗೆ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಭಕ್ತರಿಗೆ ಮಜ್ಜಿಗೆ ವಿತರಿಸಿದರು.