ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಭಯೋತ್ಪಾಧಕರ ಕೃತ್ಯ ಎಂಬುದರ ಬಗ್ಗೆ ನಮಗೆ ಮಾಹಿತಿ ಲಭಿಸಿಲ್ಲ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಭಾರೀ ಪ್ರಮಾಣದಲ್ಲಿ ನಡೆದಿಲ್ಲ. ಸಣ್ಣ ಪ್ರಮಾಣದದ್ದರೂ ಅದು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಎಲ್ಲ ಕಾಲದಲ್ಲೂ ಕೂಡ ಘಟನೆಗಳು ನಡೆದಿವೆ. ಇಂತಹ ಘಟನೆ ನಡೆಯಬಾರದು ಎಂಬುದು ನಮ್ಮ ಉದ್ದೇಶ. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಘಟನೆ ನಡೆದಿತ್ತು. ಹಿಂದಿನ ಸರ್ಕಾರದಲ್ಲಿ ಹಲವು ಸ್ಫೋಟಗಳು ನಡೆದಿತ್ತು. ನಮ್ಮ ಸರ್ಕಾರದಲ್ಲಿ ಈವಾಗ ಈ ಘಟನೆ ನಡೆದಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದರು.
ಬ್ಲಾಸ್ಟ್ ಆಗಿರುವುದು ಸತ್ಯವಾಗಿದೆ. ಬ್ಲಾಸ್ಟ್ ಮಾಡಿರುವವರ ವಿರುದ್ಧ ಶಿಸ್ತಿನ, ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಯಾರೂ, ಏನೂ ಅಂತ ಯಾರಿಗೂ ಗೊತ್ತಿಲ್ಲ ಸಿಎಂ ತಿಳಿಸಿದರು.
ಕೆಫೆಯಲ್ಲಿ ನಿಗೂಡ ಸ್ಪೋಟ ವಿಚಾರಕ್ಕೆ ಕುಣಿಗಲ್ ನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಕೆಫೆಯಲ್ಲಿ ಇಂದು ಮಧ್ಯಾಹ್ನ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಯಾವ ರೀತಿ ಆಯ್ತು ಹೇಗೆ ಮಾಡಿದ್ದಾರೆ ಅಂತಾ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಕಮಿಷನರ್ ಡಿಜಿಯವರು ಜೊತೆಗೆ FSL ಬಾಂಬ್ ಸ್ಕ್ಯಾಡ್ ಕೂಡ ಹೋಗಿದೆ. ಸ್ಥಳದಲ್ಲಿ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಬಳಿಕ ಮೂಲ ತಿಳಿಯಬೇಕಿದೆ ಘಟನೆಯಲ್ಲಿ9 ಜನರಿಗೆ ಗಾಯ ಆಗಿದೆ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದಲ್ಲಿ ಯಾರಿಗೂ ಗಂಭೀರ ಆಗಿಲ್ಲ ಎಂಬ ಮಾಹಿತಿ ಬಂದಿದೆ.
ನಾನು ಕೂಡ ಸಂಜೆ ಅಥವಾ ನಾಳೆ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡ್ತಿನಿ ಎಂದ ಹೋಂ ಮಿನಿಸ್ಟರ್ ಈಗ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದಾರೆ. ಪರಿಶೀಲನೆ ಆಗ್ತಿದೆ. ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ಮಾಡಲಾಗುತ್ತದೆ. ಹೇಳಿಕೆಗಳು ಬಂದಿವೆ ಅಷ್ಟೇ ಅವರಿವರು ಹೇಳುತ್ತಿದ್ದಾರೆ. ಐಇಡಿ ಅಂತಾ ಹೇಳ್ತಿದ್ದಾರೆ. ಆದರೆ ಖಚಿತತೆ ಇಲ್ಲ, ಬ್ಯಾಗ್ ಇತ್ತು ಅಂತಿದ್ದಾರೆ. ನಿರ್ದಿಷ್ಟ ಮಾಹಿತಿ ನಮ್ಮ ಇಲಾಖೆಯಿಂದ ಬರಬೇಕಿದೆ. ಇಂತಹ ವಿಚಾರದಲ್ಲಿ ಸ್ಪೆಕ್ಯುಲೆಟ್ ಮಾಡುವುದು ಸರಿಯಲ್ಲ. ನಮ್ಮ ಇಲಾಖೆ ವರದಿ ಬರೋವರೆಗೂ ನಾನು ಏನು ಹೇಳಲು ಆಗಲ್ಲ ಎಂದು ಪತಿಕ್ರಿಯೆ ಕೊಟ್ಟಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ನಮ್ಮ ಆಫೀಸರ್ಸ್ ತನಿಖೆ ಮಾಡ್ತಿದ್ದಾರೆ. ಯಾರು ಮಾಡಿದ್ದಾರೆ ಏನ್ ಮಾಡಿದ್ದಾರೆ. ಬೇಕು ಅಂತ ಮಾಡಿದ್ದಾರಾ? ಯಾರೆ ಆದ್ರು ಸರಿ, ಘಟನೆಯ ಎಲ್ಲಾ ವಿಡಿಯೋಗಳು ಇದೆ. ಕಂಪ್ಲಿಟ್ ಎರಡು ಮೂರು ಕಿಲೋಮೀಟರ್ ಯಾರ್ಯಾರು ಟ್ರಾವಲ್ ಮಾಡಿದ್ದಾರೆ ಎಂಬ ಲೆಕ್ಕಾಚಾರದ ಹಿಂದೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯಕ್ಕೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ನಮ್ಮ ಆಫೀಸರ್ಸ್ ತನಿಖೆ ಮಾಡ್ತಿದ್ದಾರೆ. ಯಾರಿಗೆ ಏನು ತೊಂದರೆ ಇಲ್ಲ. ಬೆಂಗಳೂರಿನಲ್ಲಿ ಯಾರು ಆತಂಕ ಪಡುವ ಅಗತ್ಯ ಇಲ್ಲ. ಕಾನೂನು ಸುವ್ಯವಸ್ಥೆ ಎಲ್ಲವನ್ನ ನಾವು ನೋಡ್ತಿದ್ದೇವೆ. ಕೆಲವರು ಇಂತಹ ಪ್ರಯತ್ನಗಳನ್ನ ಮಾಡ್ತಿರ್ತಾರೆ. ಇನ್ನು ಹೆಚ್ಚಿನ ಮಾಹಿತಿ ತಗೊಂಡು ಮಾತಾಡ್ತಿನಿ ಎಂದು ಉತ್ತರಿಸಿದ್ದಾರೆ.