Wednesday, June 25, 2025
28.6 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಐಷಾರಮಿ ರೆಸಾರ್ಟ್​ನಲ್ಲಿ ಪಿಡಿಒ ವಾಸ....

ಐಷಾರಮಿ ರೆಸಾರ್ಟ್​ನಲ್ಲಿ ಪಿಡಿಒ ವಾಸ….

ರಾಮನಗರ : ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ತಾಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್​ ಚಂದ್ರ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅಧಿಕಾರಿಯು ಐಷಾರಮಿ ಜೀವನ ಕಂಡು ದಂಗಾಗಿದ್ದಾರೆ.

ಕರ್ತವ್ಯ ನಿಮಿತ್ತ ಅವರು ಬಿಡದಿ ಸಮೀಪದ ದುಬಾರಿ ಈಗಲ್ಟನ್​ ರೆಸಾರ್ಟ್​ನಲ್ಲಿ ಮನೆ ಬಾಡಿಗೆಗೆ ಪಡೆದು ವಾಸವಾಗಿದ್ದರು. ಬೆಳಿಗ್ಗೆಯೇ ರೆಸಾರ್ಟ್​ಗೆ ತೆರಳಿದ ಪೊಲಿಸರು ವಿಚಾರಣೆ ನಡೆಸಿದರು. ಮನೆ ಜೊತೆಗೆ ಕಚೇರಿಯನ್ನು ಪರಿಶೀಲಿಸಿ ದಾಖಲೆ ಹಾಗೂ ವಶಕ್ಕೆ ಪಡೆದಿದ್ದಾರೆ.

ಯತೀಶ್​​ ಅವರ ಮಾಸಿಕ ಸಂಬಳ ಮತ್ತು ರೆಸಾರ್ಟ್​ನಲ್ಲಿ ಪಾವತಿಸುತ್ತಿರುವ ಬಾಡಿಗೆ ಮೊತ್ತದ ನಡುವಣ ವ್ಯತ್ಯಾಸ ಪರಿಶೀಲಿಸಲಾಗುತ್ತಿದೆ. ಯತೀಶ್​​ ಅವರ ಇತರ ಆದಾಯದ ಮೂಲಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಯತೀಶ್​​ ಸಹೋದ್ಯೋಗಿಯಾಗಿರುವ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಪಿಡಿಒ  ಒಬ್ಬರ ಚನ್ನಪಟ್ಟಣದಲ್ಲಿರುವ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಟ್ಯಾಂತರ ರೂಪಾಯಿ ಅವ್ಯವಹಾರ : ಪಂಚಾಯಿತಿಯಲ್ಲಿ ವಾರ್ಷಿಕ ಸುಮಾರು ₹ 60 ಕೋಟಿ ತೆರಿಗೆ ವಸೂಲಿಯಾಗುತ್ತದೆ. ಈ ಹಣವನ್ನು ಯತೀಶ್​​ ದುರುಪಯೋಗ  ಮಾಡಿಕೊಂಡಿದ್ದಾರೆ. ಕುಡಿಯುವ ನೀರು ಸಾಮಾಗ್ರಿ ಖರೀದಿಯಲ್ಲಿ ಅಕ್ರಮ,  ಲೇಔಟ್​​ ಮಾಡದ ಜಾಗಕ್ಕೆ ಇ – ಖಾತೆ ನೀಡುವುದು ಸೇರಿದಂತೆ ಹಲವು ಅವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ  ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಒತ್ತಾಯಿಸಿದರು.

ಯತೀಶ್​​  ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಕುರಿತು ತಾಲೂಕು ಪಂಚಾಯಿತಿ ಇ.ಒ ಮತ್ತು ಜಿಲ್ಲಾಪಂಚಾಯಿತಿ ಸಿಇಒ ಅವರಿಗೆ ಸೂರು ಕೊಟ್ಟಿದ್ದೆ. ಆದರೆ ಇಬ್ಬರೂ ಕ್ರಮ ಕೈಗೊಳ್ಳಲಿಲ್ಲ. ಕಡೆಗೆ ಲೋಕಾಯುಕ್ತಕ್ಕೆ ಸೂರು ಕೊಟ್ಟಿದ್ದೆ ಪೊಲೀಸರೇ ದಾಳಿ ನಡೆಸಿದ್ದಾರೆ ಎಂದರು.

ಮನೆಯಲ್ಲಿ ₹ 2.23 ಕೋಟಿ ಆಸ್ತಿ ಪತ್ತೆ : ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಪಿಡಿಒ ಯತೀಶ್​​ ಅವರ ಇಲ್ಲಿನ ರಾಘವೇಂದ್ರ  ನಗರದ ಮನೆ ಮೇಲೆ ಬುಧವಾರ ಬೆಳಗ್ಗೆ ದಿಢೀರ್​​​ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹ 2.23 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ಯತೀಶ್​ ಅವರ ಬಳಿ ₹ 1.16 ಕೋಟಿ ಮೌಲ್ಯದ 4 ನಿವೇಶನಗಳಿದ್ದು, 2 ನಿವೇಶನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ. ಮನೆಯೊಂದರ ಮೌಲ್ಯ ₹ 92 ಲಕ್ಷವಾಗಿದೆ.

ಚರಾಸ್ತಿಯಲ್ಲಿ ₹ 5. 31 ಲಕ್ಷ ನಗದು, ₹24.83 ಲಕ್ಷ ಮೌಲ್ಯದ 448 ಗ್ರಾಂ ಚಿನ್ನ, ₹ 71.800  ಮೌಲ್ಯದ 415 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ₹ 22.98 ಲಕ್ಷ ಮೌಲ್ಯದ  ವಾಹನಗಳು  ಹಾಗೂ ₹ 39.59 ಲಕ್ಷ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments