ಪುತ್ತೂರು : ಶ್ರೀರಾಮ ಪ್ರಾಣಪ್ರತಿಷ್ಠಾಪನಾ ಅಕ್ಷತೆ ಹಂಚುವ ಜವಾಬ್ದಾರಿ ಮುಂಡೂರಿನಲ್ಲಿ ಸಿಗಲಿಲ್ಲ ಎಂಬ ಅಸಮಾಧಾನ ಮತ್ತು ರಸ್ತೆ ವಿವಾದಕ್ಕೆ ಸಂಬಂಧಿಸಿ ನನ್ನ ಮತ್ತು ನನ್ನ ತಾಯಿ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಈ ಎರಡೂ ವಿಚಾರಗಳಿಗೆ ಸಂಬಂಧಿಸಿ ಅರುಣ್ ಕುಮಾರ್ ಪುತ್ತಿಲ ಕುಮ್ಮಕ್ಕು ನೀಡಿದ್ದಾರೆ ಎಂದು ಹಲ್ಲೆಗೊಳಗಾದ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿರುವ ಯುವಕ ಸಂತೋಷ್ ಬಿ.ಕೆ ಮತ್ತು ಸಹೋದರ ಸಂದೀಪ್ ಬಿ.ಕೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಉಕ್ಕಿನಡ್ಕ ದೇವಳದಲ್ಲಿ ಮಂತ್ರಾಕ್ಷಣೆ ಹಂಚುವ ವಿಚಾರಕ್ಕೆ ಸಂಬಂಧಿಸಿ ನಡೆದ ಸಭೆಯಲ್ಲಿ ಭಾಗವಹಿಸಿ ಸಂಜೆ ಹೊತ್ತು ಮನೆಗೆ ಬರುತ್ತಿರುವಾಗ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಸ್ಥಳೀಯರಾದ ಧನಂಜಯ ನಾಯ್ಕ, ಕೇಶವ ನಾಯ್ಕ ಹಾಗೂ ಜಗದೀಶ್ ಎಂಬವರು ನನ್ನ ವರ್ಗ ಜಾಗದಲ್ಲಿರುವ ತೋಟದ ಕಾಲು ದಾರಿಯಲ್ಲಿ ನನ್ನ ಮೇಲೆ ಕಬ್ಬಿಣದ ರಾಡ್ ಹಾಗೂ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದರು. ನಾನು ಬೊಬ್ಬೆ ಹಾಕಿದ ಪರಿಣಾಮ ಮನೆಯಲ್ಲಿದ್ದ ತಾಯಿ ಓಡಿ ಬಂದಾಗ ಅವರನ್ನು ದೂಡಿ ಹಾಕಿ ಅವರ ಮೇಲೂ ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದರು.
ಮಂತ್ರಾಕ್ಷತೆ ಜವಾಬ್ದಾರಿ `ಅಸಮಾಧಾನ’
ಮುಂಡೂರು ಭಾಗದ ಸುಮಾರು ೨೦೦ ಮನೆಗಳಿಗೆ ಅಕ್ಷತೆ ಹಂಚುವ ಸಂಚಾಲಕ ಜವಾಬ್ದಾರಿಯನ್ನು ನನಗೆ ಸಂಘಪರಿವಾರ ನೀಡಿತ್ತು. ಇದರಂತೆ ೯೦ ಮನೆಗಳಿಗೆ ಅಕ್ಷತೆ ಹಂಚಿ ಉಳಿದ ಅಕ್ಷತೆಯನ್ನು ಮುಂದಿನ ದಿನ ಹಂಚುವ ಹಿನ್ನಲೆಯಲ್ಲಿ ಮುಂಡೂರಿನ ಮೃತ್ಯುಂಜಯೇಶ್ವರ ದೇವಳದಲ್ಲಿ ಇಡಲಾಗಿತ್ತು. ಶುಕ್ರವಾರ ರಾತ್ರಿ ಅಲ್ಲಿಂದ ಅಕ್ಷತೆಯನ್ನು ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತಿಲಪರಿವಾರ ಸಂಘಟನೆಯಲ್ಲಿರುವವರು ತೆಗೆದುಕೊಂಡು ಬಂದು ೧೦ ಮನೆಗಳಿಗೆ ಹಂಚಿದ್ದಾರೆ. ನಾನು ಸಂಚಾಲಕನಾಗಿದ್ದರೂ ಒಂದು ಮಾತು ಕೇಳದೆ ಈ ಕೆಲಸ ಮಾಡಿದ್ದಾರೆ. ನನ್ನ ಮನೆಗೂ ಬಂದು ಅಕ್ಷತೆ ನೀಡಿದ್ದಾರೆ. ಆದರೆ ಈ ಭಾಗದಲ್ಲಿ ಅಕ್ಷತೆ ಹಂಚುವ ಜವಾಬ್ದಾರಿ ತಮಗೆ ಸಿಗಲಿಲ್ಲ ಎಂಬ ಪೂರ್ವಧ್ವೇಷ ಹಾಗೂ ಆ ಜವಾಬ್ದಾರಿಯ ಸಂಚಾಲಕತ್ವ ನನಗೆ ದೊರೆತಿರುವ ಹಿನ್ನಲೆ ಅಸಮಾಧಾನದಿಂದ ನನ್ನ ಮತ್ತು ನನ್ನ ತಾಯಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ೩ ವರ್ಷಗಳಿಂದ ಇಲ್ಲಿನ ನಾಡಾಜೆ ಮತ್ತು ಬರೆಕೋಲಾಡಿ ಎಂಬ ರಸ್ತೆ ವಿವಾದವಿದ್ದು, ಈ ರಸ್ತೆಗೆ ಗ್ರಾಮಪಂಚಾಯತ್ ವತಿಯಿಂದ ಅನುದಾನ ದೊರಕಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರು ರೂ.೧೦ ಲಕ್ಷ ಅನುದಾನ ನೀಡಿದ್ದು, ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಈ ರಸ್ತೆಯನ್ನು ಬಂದ್ ಮಾಡಲು ಅರುಣ್ ಕುಮಾರ್ ಪುತ್ತಿಲ ನೇತೃತ್ವ ವಹಿಸಿದ್ದರು. ನನ್ನ ವರ್ಗ ಜಾಗದ ತೋಟದಲ್ಲಿಯೂ ನನ್ನ ಮೇಲೆ ಹಲ್ಲೆ ನಡೆಸಿದ ಕುಟುಂಗಳಿಗೆ ಹೋಗಲು ಕಾಳು ದಾರಿಯಲ್ಲಿ ಅವಕಾಶ ಮಾಡಿಕೊಟ್ಟಿದ್ದೇನೆ. ಆದರೆ ಅವರು ಈ ವಿವಾದವನ್ನೂ ಮುಂದಿಟ್ಟುಕೊಂಡು ಅಕ್ಷತೆ ಹಂಚುವ ಜವಾಬ್ದಾರಿಯ ಅಸಮಾಧಾನ ಹಾಗೂ ರಸ್ತೆ ವಿವಾದಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಎಫ್‌ಐಆರ್‌ನಲ್ಲಿ ಮಂತ್ರಾಕ್ಷತೆ ಹಂಚುವ ವಿಚಾರದಲ್ಲಿ ಅಸೂಯೆಗೊಂಡು ಪುತ್ತಿಲ ಪರಿವಾರ ಸಂಘಟನೆಯ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಸ್ಪಷ್ಟವಾಗಿ ದಾಖಲು ಮಾಡಲಾಗಿದೆ. ಆದರೆ ಜಿಲ್ಲಾ ಪೊಲೀಸ್ ಅಧಿಕಾರಿ ಇದು ಜಾಗದ ವಿವಾದ ಮಂತ್ರಾಕ್ಷತೆ ಹಂಚುವ ವಿಚಾರದಲ್ಲಿ ಹಲ್ಲೆ ನಡೆಸಿದ್ದಲ್ಲ ಎಂದು ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ತಪ್ಪು ಮಾಹಿತಿ ಹರಡದಂತೆ ಸೂಚಿಸಿದ್ದರು. ಆದರೆ ಇದೀಗ ಗಾಯಾಳು ಸಂತೋಷ್ ಬಿ.ಕೆ ಅವರ ಪತ್ರಿಕಾಗೋಷ್ಠಿಯ ಹೇಳಿಕೆಯ ಹಿನ್ನಲೆಯಲ್ಲಿ ಸತ್ಯ ಯಾವುದು ಎಂಬ ಸಂಶಯ ಉಂಟಾಗಿದೆ. ಪತ್ರಿಕಾಗೋಷ್ಟಿಯಲ್ಲಿ ಹಲ್ಲೆಗೊಳಗಾದ ಸಂತೋಷ್ ಬಿಕೆ ಅವರ ತಾಯಿ ಸವಿತಾ ಇದ್ದರು.