ಸೇಡಂ: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಜಾತಿ, ಮತ -ಧರ್ಮ ಎಂದು ನೋಡದೆ ಐದು ಗ್ಯಾರಂಟಿಗಳನ್ನು ಎಲ್ಲರಿಗೂ ಜಾರಿಗೆ ತಂದಿದ್ದೇವೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಸೇಡಂ ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರ ಮತಯಾಚಿಸಿ ಅವರು ಮಾತನಾಡಿದ ಅವರು, ಈ ಹಿಂದೆ ಬಿಜೆಪಿ 617 ಭರವಸೆಗಳನ್ನು ನೀಡಿತ್ತು. ಆದರೆ, ಈಡೇರಿಸಿದ್ದು ಕೇವಲ 40-50 ಮಾತ್ರ. ಆದರೆ ನಾವು 162 ಭರವಸೆಗಳನ್ನು ನೀಡಿದ್ದು ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಸಲ ಐದು ಜನಹಿತ ಕಾಪಾಡುವ ಗ್ಯಾರಂಟಿಗಳ ಭರವಸೆ ನೀಡಿದ್ದೆವು, ಅವುಗಳನ್ನು ಜಾರಿಗೆ ತಂದಿದ್ದೇವೆ ಇದು ನಮ್ಮ ಬದ್ದತೆ. ನಮ್ಮ ಬದ್ಥತೆಯನ್ನು ಟೀಕಿಸುವ ಉಮೇಶ ಜಾಧವ ಹಾಗೂ ರಾಜಕುಮಾರ ತೇಲ್ಕೂರು ಜನರ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಅವರು ಹೇಳಿದರು.
ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ಎಸ್ ಟಿ ಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದ್ದ ಉಮೇಶ್ ಜಾಧವ ಏನು ಕ್ರಮ ಕೈಗೊಂಡಿದ್ದಾರೆ ಎಂದು ಉತ್ತರಿಸಲಿ ಎಂದು ಸವಾಲು ಹಾಕಿದ ಸಚಿವರು, ಕೇಂದ್ರ ಸರ್ಕಾರ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ದಿನಬಳಕೆ ವಸ್ತುಗಳ, ಗ್ಯಾಸ್ ಸಿಲೆಂಡರ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುತ್ತಲೇ ಇವೆ. ಈಗ ನಿಮಗೆ ಒಂದು ಅವಕಾಶ ಬಂದಿದೆ. ಜನವಿರೋಧಿ, ರೈತರ ಬಡವರ ವಿರೋಧಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಮಾತನಾಡಿ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿ ಮತದಾರರಿಗೆ ಸರ್ಕಾರದ ಯೋಜನೆಗಳು ಹಾಗೂ ಅವುಗಳ ಲಾಭಗಳ ಬಗ್ಗೆ ತಿಳಿಸಿ ಮತಯಾಚಿಸಿ ಎಂದರು. ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೇಡಂ ಮತಕ್ಷೇತ್ರದಿಂದ ಲೀಡ್ ಕೊಟ್ಟಿದ್ದೀರಿ. ಆದರೆ, ಖರ್ಗೆಸಾಹೇಬರಿಗೆ ಸೋಲಾಯಿತು. ಆ ನಂತರ ಜನರೇ ಪಶ್ಚಾತ್ತಾಪಪಡುವಂತಾಯಿತು. ಈಗ ಮತ್ತೆ ಚುನಾವಣೆ ಬಂದಿದೆ. ಈ ಸಲ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಟೀಕಿಸಿದ ಶರಣಪ್ರಕಾಶ ಪಾಟೀಲ, ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ. ಅಸಂಖ್ಯಾತ ಕಾಂಗ್ರೆಸಿಗರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಬಿಜೆಪಿಯ ಯಾವ ನಾಯಕರೂ ಭಾಗವಹಿಸಿರಲಿಲ್ಲ ಯಾಕೆಂದರೆ ಅವರು ಬ್ರಿಟೀಷರ ಪರವಾಗಿದ್ದರು. ಅಂತವರು ನಮಗೆ ಪಾಠ ಮಾಡಲು ಬರುತ್ತಿದ್ದಾರೆ ಎಂದು ಕುಟುಕಿದರು.
ಆಹಾರ ಭದ್ರತೆ ಕಾಯಿದೆ, ಶೈಕ್ಷಣಿಕ ಹಕ್ಕು ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಸೇರಿದಂತೆ ಹಲವಾರು ಕಾಯಿದೆಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಜಾರಿಗೆ ತಂದಿದೆ. ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿ ರೈತರ ಸಾಲ ಮನ್ನಾ ಮಾಡಲು ಹಣದ ಕೊರತೆ ಇದೆ ಎಂದು ನೆವ ಹೇಳಿ ಶ್ರೀಮಂತರ, ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವ ವಾಗ್ದಾನ ಮಾಡಿದ್ದ ಮೋದಿ ಅದನ್ನೂ ಮಾಡಲಿಲ್ಲ. ಈ ದೇಶದ ಬಡವರಿಗೆ ಯುವಕರಿಗೆ ಅವು ಏನು ಮಾಡಿದ್ದಾರೆ ಎಂದು ಲೆಕ್ಕ ಕೊಡಲಿ ಎಂದು ಆಗ್ರಹಿಸಿದರು.