ಹೈಕಮಾಂಡ್ ತಪರಾಕಿ ಬಳಿಕವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಿಂದ ಡಿಸಿಎಂ ಬೇಡಿಕೆ ಕೂಗು ಇನ್ನೂ ನಿಂತಿಲ್ಲ. ಅದರಲ್ಲೂ ಸಿದ್ದು ಆಪ್ತ, ಎಸ್ ಸಿ, ಎಸ್ ಟಿ ಸಮುದಾಯದ ಸಚಿವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಜೊತೆಗೆ ಇವರಿಗೆ ಕೆಲ ಸಿದ್ದು ಆಪ್ತ ಲಿಂಗಾಯತ ಸಚಿವರು ಸಾಥ್ ನೀಡಿದ್ದಾರೆ.
ಡಿಸಿಎಂ ಬೇಕು ಬೇಕು ಅಂತ ಪಟ್ಟು ಹಿಡಿದಿರೋ ಸಚಿವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಹೈಕಮಾಂಡ್ ಸೂಚನೆ ನಂತರವೂ, ಡಿಸಿಎಂ ಬೇಡಿಕೆ ಇಟ್ಟ ಸಚಿವ ರಾಜಣ್ಣ ವಿರುದ್ಧ ಕೆಲವು ಹಿರಿಯ ನಾಯಕರು ದೂರು ನೀಡಿದ್ದಾರೆ. ದೂರನ್ನ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಸಚಿವ ರಾಜಣ್ಣ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.
ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಚಿವರಾದ ಮಹದೇವಪ್ಪ, ರಾಜಣ್ಣ, ಬೋಸರಾಜು, ಈಶ್ವರ್ ಖಂಡ್ರೆ ಭೇಟಿಯಾಗಿ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ಆಪ್ತ ಬಳಗ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಕಟ್ಟಿಹಾಕಲು, ಇಂಥಹ ದಾಳಗಳನ್ನ ಉರುಳಿಸುತ್ತಿದೆ ಎಂಬ ಚರ್ಚೆ ಚಾಲ್ತಿಯಲ್ಲಿದೆ.