ರಾಯಚೂರು: ಎರಡು ತಿಂಗಳಲ್ಲಿ ಜಾತಿ ಸಮಿಕ್ಷೆ ವರದಿ ಸರಕಾರಕ್ಕೆ ನೀಡುವಂತೆ ಹಿಂದುಗಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯ ಪ್ರಕಾಶ ಹೆಗಡೆ ತಿಳಿಸಿದ್ದು, ವರದಿ ನೀಡಿದರೆ ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ದೇವದುರ್ಗ ತಾಲೂಕಿನ ತಿಂಥಿಣಿ ಸೇತುವೆ ಬಳಿ ಇರುವ ಶ್ರಿ ಕನಕ ಗುರುಪೀಠದಿಂದ ಆಯೋಜಿಸಿದ ಹಾಲುಮತ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷ ಶ್ರೀರಾಮ ಮತ್ತು ರಾಮ ಮಂದಿರದ ಬಗ್ಗೆ ವಿರೋಧವಿಲ್ಲ. ಆದರೆ ಇದರ ಹೆಸರಲ್ಲಿ ನಡೆಯುವ ಬಿಜೆಪಿ ರಾಜಕೀಯಕ್ಕೆ ವಿರೋಧ ವ್ಯಕ್ತ ಪಡಿಸಲಾಗಿದೆ. ರಾಮ ಮಂದಿರ ಉದ್ಘಾಟನೆಗೆ ಹೋಗುವ, ಹೋಗದಿರುವ ಯಾವ ಹೇಳಿಕೆ ನೀಡಿಲ್ಲ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮ, ಜಾತಿ ಜನಾಂಗವನ್ನು ಸಮಾನವಾಗಿ ಕಾಣುತ್ತದೆ. ಬಿಜೆಪಿ ರೀತಿ ಕೋಮುವಾದ ರಾಜಕೀಯ ಮಾಡುವುದಿಲ್ಲ. ಮೈಸೂರು ಲೋಕಸಭೆ ಕ್ಷೇತ್ರದಿಂದ ಡಾ. ಯತೀಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಎಲ್ಲಿಯೂ ನಾನಾಗಲಿ, ಯಂತೀಂದ್ರನಾಗಲಿ ಹೇಳಿಲ್ಲ. ರಾಜ್ಯ ನಗರಾಭಿವೃದ್ಧಿ ಸಚಿವ ಸುರೇಶ ಬೈರತಿ ಅವರು ವರದಿ ನೀಡಿದ ನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಶಾಸಕರು, ಜಿಲ್ಲಾ ಮುಖಂಡರು ಸೂಚಿಸಿದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಐದು ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯಪಾಲರ ಅನುಮತಿ ಅಗತ್ಯ ಹಿನ್ನೆಲೆಯಲ್ಲಿ ಹಣ ಬಳಕೆ ವಿಳಂಬವಾಗಿದೆ. ಈ ಭಾಗದ ಅಧಿಕಾರಿಗಳ ಸಭೆ ಕರೆದು ತೀವ್ರಗತಿಯಲ್ಲಿ ಹಣ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಸಚಿವರಾದ ಬಸವರಾಜ ಬೈರತಿ,ಎನ್.ಎಸ್. ಬೋಸರಾಜು, ಶಾಸಕರಾದ ಬಸವರಾಜ ದದ್ದಲ್, ಬಸವರಾಜ್ ತುರ್ವಿಹಾಳ್, ರಾಘವೇಂದ್ರ ಇಟ್ನಾಳ್ ಇದ್ದರು.