ಬೆಂಗಳೂರು : ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಂತರ ರಾಜ್ಯಮಟ್ಟದ ತಂಡ ರಚಿಸಿಕೊಂಡಿದ್ದ ಬಿ.ವೈ.ವಿಜಯೇಂದ್ರ ಇದೀಗ ಜಿಲ್ಲಾ ಘಟಕಗಳ ಪುನಾರಚನೆ ಕಾರ್ಯ ನಡೆಸಿ, ಎಲ್ಲ ಜಿಲ್ಲೆಗಳಿಗೂ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ಜಿಲ್ಲಾ ಸಮಿತಿಯಲ್ಲೂ ಆಪ್ತರಿಗೆ ವಿಜಯೇಂದ್ರ ಮಣೆ ಹಾಕಿದ್ದಾರೆ.ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಹಿರಿಯ ನಾಯಕರ ಸಭೆ ನಡೆಸಿ, ಅಭಿಪ್ರಾಯ, ಸಲಹೆ ಪಡೆದುಕೊಂಡು ರಾಜ್ಯ ಸಮಿತಿಯ ಪುನಾರಚನೆ ಮಾಡಿದ್ದ ವಿಜಯೇಂದ್ರ, ಜಿಲ್ಲಾ ಸಮಿತಿಗಳ ವಿಚಾರದಲ್ಲಿಯೂ ಅದೇ ಹೆಜ್ಜೆ ಇರಿಸಿದ್ದಾರೆ.
ಪಕ್ಷದ ಪ್ರಮುಖ ನಾಯಕರು, ಹಿರಿಯ ನಾಯಕರು, ಜಿಲ್ಲಾ ಮುಖಂಡರ ಸಭೆ ನಡೆಸಿದ ನಂತರವೇ ಜಿಲ್ಲಾ ಘಟಕಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿದ್ದಾರೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ ಹೈಕಮಾಂಡ್ ಸಮ್ಮತಿ ಪಡೆದುಕೊಂಡು ಜಿಲ್ಲಾ ಸಮಿತಿಗಳಿಗೆ ಹೊಸ ಅಧ್ಯಕ್ಷರುಗಳನ್ನು ನೇಮಿಸಿದ್ದಾರೆ.
ಬಿಎಸ್ವೈ ಕುಟುಂಬ ಬೆಂಬಲಿಸುವವರಿಗೆ ಅವಕಾಶ: 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ 30 ಜಿಲ್ಲೆಗಳಿಗೆ ಹೊಸಬರ ನೇಮಕವಾಗಿದ್ದು 9 ಜಿಲ್ಲೆಗಳಿಗೆ ಹಾಲಿ ಅಧ್ಯಕ್ಷರನ್ನೇ ಮುಂದುವರೆಸಲಾಗಿದೆ. ಸಪ್ತಗಿರಿ ಗೌಡ, ಎಸ್.ಹರೀಶ್ ಸೇರಿ ಬಿಎಸ್ವೈ ಕುಟುಂಬ ಬೆಂಬಲಿಸುವವರಿಗೆ ಅವಕಾಶ ನೀಡಲಾಗಿದೆ. ಪ್ರಕೋಷ್ಠಗಳ ರಾಜ್ಯ ಸಂಯೋಜನ ಸ್ಥಾನವನ್ನು ಶಿವಮೊಗ್ಗದ ಬಿಎಸ್ವೈ ಆಪ್ತ ದತ್ತಾತ್ರಿಗೆ ನೀಡಲಾಗಿದೆ. ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೇಕಲ್ಲು ಅವರನ್ನು ಮುಂದುವರೆಸಲಾಗಿದೆ.