ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ದೇಶದ ವಿವಿಧೆಡೆಯೂ ಪೂಜಾ ಕಾರ್ಯಕ್ರಮ, ಭಜನೆಗಳು ನಡೆಯುತ್ತಿವೆ. ಅಯೋಧ್ಯೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವನ್ನೂ ದೇಶದ ವಿವಿಧೆಡೆ ಆಯೋಜಿಸಲಾಗಿದೆ. ತಮಿಳುನಾಡು ಸರ್ಕಾರ ನೇರ ಪ್ರಸಾರವನ್ನು ನಿಷೇಧಿಸಿದೆ. ನೇರ ಪ್ರಸಾರ ಮಾತ್ರವಲ್ಲ, ದೇವಸ್ಥಾನಗಳಲ್ಲಿ ರಾಮನ ಹೆಸರಲ್ಲಿ ವಿಶೇಷ ಪೂಜೆ, ಅನ್ನ ದಾನ ಇತ್ಯಾದಿ ಕಾರ್ಯಕ್ರಮವನ್ನೂ ನಡೆಸುವಂತಿಲ್ಲ. ತಮಿಳುನಾಡು ಸರ್ಕಾರದ ಈ ಕ್ರಮವನ್ನು ಬಿಜೆಪಿ ನಾಯಕರು ಬಲವಾಗಿ ಖಂಡಿಸಿದ್ದಾರೆ. ಇದು ಸನಾತನ ಧರ್ಮ ವಿರೋಧಿ ನಿಲುವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಮೊದಲಾದವರು ಟೀಕಿಸಿದ್ದಾರೆ.
‘ತಮಿಳುನಾಡಿನಲ್ಲಿ 200ಕ್ಕೂ ಹೆಚ್ಚು ರಾಮ ಮಂದಿರಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ನಿರ್ವಹಣೆ ಆಗುವ ದೇವಸ್ಥಾನಗಳಲ್ಲಿ ಶ್ರೀ ರಾಮನ ಹೆಸರಿನಲ್ಲಿ ಯಾವುದೇ ಪೂಜೆ, ಭಜನೆ, ಪ್ರಸಾದ ಹಂಚಿಕೆ, ಅನ್ನ ದಾನಕ್ಕೆ ಅವಕಾಶ ಕೊಟ್ಟಿಲ್ಲ. ಖಾಸಗಿಯಿಂದ ನಿರ್ವಹಣೆಯಾಗುವ ದೇವಸ್ಥಾನಗಳಿಗೂ ಪೊಲೀಸರು ನಿರ್ಬಂಧ ಹಾಕಿದ್ದಾರೆ. ಇದು ಹಿಂದೂ ವಿರೋಧಿ, ದ್ವೇಷದ ಕ್ರಮವಾಗಿದ್ದ ಬಲವಾಗಿ ಖಂಡಿಸುತ್ತೇನೆ’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಮ ಮಂದಿರ ಕಾರ್ಯಕ್ರಮಗಳನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಕೂಡ ಖಂಡಿಸಿದ್ದಾರೆ. ತಮಿಳುನಾಡು ಸರ್ಕಾರದ ಸನಾತನ ಧರ್ಮ ವಿರೋಧದ ಅತಿರೇಕದ ನಿಲುವು ಎಂದು ಅವರು ಕಿಡಿಕಾರಿದ್ದಾರೆ.
https://x.com/annamalai_k/status/1749004656544821657?s=20