ಗುಜರಾತ್ನಲ್ಲಿ ದೇಶದ ಅತಿ ಉದ್ದನೆಯ ತೂಗು ಸೇತುವೆ ಲೋಕಾರ್ಪಣೆ ಆಗಿದೆ. ತಮ್ಮ ತವರು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುದರ್ಶನ ಸೇತುವೆಯನ್ನು ಉದ್ಘಾಟನೆ ಮಾಡಿದರು. ಇದು 2.5 ಕಿ.ಮೀ ಉದ್ದದ ಸೇತುವೆಯಾಗಿದ್ದು, ಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.
ಈ ಸೇತುವೆಯಿಂದ ದ್ವಾರಕೇಶ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಬಹಳ ಅನುಕೂಲವಾಗಲಿದೆ. 2017ರಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುದರ್ಶನ ಸೇತುವೆ ಉದ್ಘಾಟನೆಗೂ ಮೊದಲು ಪ್ರಧಾನಿ ಮೋದಿ ಬೇಟ್ ದ್ವಾರಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸುದರ್ಶನ ಸೇತುವೆ ವಿಶೇಷತೆಗಳು : ಓಖಾ ಮುಖ್ಯ ಭೂಭಾಗವನ್ನು ಬೆಟ್ – ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ ಸುದರ್ಶನ್ ಸೇತುವೆಯು ಈ ಪ್ರದೇಶದ ಸಂಪರ್ಕಕ್ಕೆ ಹೊಸ ದಿಕ್ಕನ್ನು ನೀಡುತ್ತದೆ. ಸುದರ್ಶನ್ ಸೇತು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಇದರಲ್ಲಿ ಫುಟ್‍ಪಾತ್‍ನ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.
ಚತುಷ್ಪಥ ರಸ್ತೆಯನ್ನು ಒಳಗೊಂಡಿರುವ ಸುದರ್ಶನ ಸೇತು 2.32 ಕಿಮೀ ಗಳಷ್ಟು ಉದ್ದವಿದೆ. ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಇದು ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.
ಸೇತುವೆ ಮೇಲೆ ನಿರ್ಮಾಣಗೊಂಡಿರುವ ರಸ್ತೆಗಳು 27.2 ಮೀಟರ್ ಅಂದ್ರೆ ಸುಮಾರು 89 ಅಡಿಗಳಷ್ಟು ಅಗಲವಿದೆ. ಎರಡೂ ಬದಿಗಳಲ್ಲಿ 2.5 ಮೀಟರ್ (8 ಅಡಿ) ಗಳಷ್ಟು ಪಾದಚಾರಿ ಮಾರ್ಗಕ್ಕೆ ಸ್ಥಳಾವಕಾಶವಿದೆ. ಈ ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನ ಹಾಕಲಾಗಿದೆ ಮತ್ತು ಶ್ರೀಕೃಷ್ಣನ ಚಿತ್ರಗಳನ್ನ ಅಲಂಕರಿಸಲಾಗಿದೆ.