ಮೈಸೂರು: ದೇಶದೆಲ್ಲೆಡೆ ರಾಮನ ಜಪ ಮೊಳಗುತ್ತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಿಂದೂ-ಮುಸ್ಲಿಂರ ನಡುವೆ ದ್ವೇಷ ಮೂಡಿಸುವವರ ಮಧ್ಯೆ ಭಾವೈಕ್ಯತಾ ಸಂದೇಶ ಸಾರುವ ಪ್ರಸಂಗಗಳು ಮೈಸೂರಿನಲ್ಲಿ ನಡೆಯುತ್ತಿದೆ. ನಗರದ ದೇವರಾಜ ಮೊಹಲ್ಲಾದ ಮುಸ್ಲಿಂರು ಬಾಂಧವರು ಇದಕ್ಕೆ ಸಾಕ್ಷಿಯಾಗಿದ್ದಾರೆ.
ಹೌದು…ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣಗೊಂಡಿರುವ ಶ್ರೀಲೋಕಾಭಿರಾಮ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರೇ ಹೆಚ್ಚಿನ ದೇಣಿಗೆ ಕೊಟ್ಟಂತಹ ಉದಾಹರಣೆ ಇದೆ. 1991ರ ಸಮಯದಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರಕ್ಕೆ ಅತಿ ಹೆಚ್ಚಿನ ದೇಣಿಗೆಯನ್ನು ಇಲ್ಲಿನ ಮುಸ್ಲಿಂ ಉದ್ಯಮಿಗಳು ನೀಡಿದ್ದಾರೆ.ಮುಸಲ್ಮಾನರು 1,500 ರೂ. ನಿಂದ 8,000 ರೂ. ವರೆಗೂ ದೇಣಿಗೆ ನೀಡಿದ್ದಾರೆ. ಅಂತಹವರ ಸ್ಮರಣಾರ್ಥವಾಗಿ ಅವರ ಹೆಸರು, ಫೋಟೋಗಳನ್ನ ಇಂದಿಗೂ ಮಂದಿರದ ಒಳಗೆ ಹಾಕಲಾಗಿದೆ. ಅಲ್ಲದೆ ಈ ಶ್ರೀರಾಮ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಬಂದು ಈಗಲೂ ಶ್ರೀರಾಮನಿಗೆ ಪೂಜೆ ಸಲ್ಲಿಸುತ್ತಾರೆ.
ಉದ್ಯಮಿಯೊಬ್ಬರ ಪುತ್ರ ಮಾತನಾಡಿ ನಮ್ಮ ತಂದೆ ಮೀರ್ ಬಷೀರ್ ಅಹ್ಮದ್ ಖುರೇಷಿ ಹಣ್ಣಿನ ವ್ಯಾಪಾರಾದ ಜೊತೆಗೆ, ಸಮಾಜ ಸೇವೆ ಮಾಡುತ್ತಿದ್ದರು. 1991ರ ಅವಧಿಯಲ್ಲೇ ಇಲ್ಲಿನ ಮಂದಿರ ನಿರ್ಮಾಣಕ್ಕೆ 8 ಸಾವಿರ ರೂ. ನೀಡಿದ್ದಾರೆ. ನಾವು ಹುಟ್ಟಿ ಬೆಳೆದಿದ್ದು ಇಲ್ಲೇ, ನಮ್ಮ ತಂದೆ ಚಿಕ್ಕಂದಿನಿಂದಲೂ ನನ್ನನ್ನು ಇಲ್ಲಿನ ರಾಮಮಂದಿರಕ್ಕೆ ಕರೆದುಕೊಂಡು ಬರುತ್ತಿದ್ದರು. ಈಗಲೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
1992ರ ಬಾಬರಿ ಮಸೀದಿ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ಗಲಾಟೆ ಎಲ್ಲೆಡೆ ವ್ಯಾಪಿಸಿತ್ತು. ಆದ್ರೆ ನಮ್ಮ ಮೊಹಲ್ಲಾದಲ್ಲಿ ಅದರ ಕಹಿ ಅನುಭವ ನಮಗೆ ತಾಕಲಿಲ್ಲ. ನಾವೆಲ್ಲರೂ ಅಂದಿನಿಂದ ಈವರೆಗೆ ಅಣ್ಣ-ತಮ್ಮಂದಿರಂತೆ ಇದ್ದೇವೆ. ಈಗಲೂ ದೇವಸ್ಥಾನಕ್ಕೆ ಬರುತ್ತೇವೆ. ದೇವಸ್ಥಾನದ ಕೆಲಸ ಏನೇ ಇದ್ದರೂ ಒಟ್ಟಾಗಿ ಸೇರಿ ಮಾಡುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.