ಮೈಸೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿರುವ ಬಿ.ಕೆ. ಅಲ್ತಾಫ್ ಖಾನ್ ವಿರುದ್ಧ ಕೊಲೆ ಕೇಸು ದಾಖಲಾಗಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಮೈಸೂರಿನ ಅಕ್ಮಲ್ ಎಂಬಾತನ ಕೊಲೆ ಕೇಸ್‌ನಲ್ಲಿ ಬಿ.ಕೆ.ಅಲ್ತಾಫ್ ಖಾನ್ A2 ಆರೋಪಿಯಾಗಿದ್ದಾರೆ. ಇದೇ ಮಾರ್ಚ್ 9ರಂದು ಮೈಸೂರಿನ ರಾಜೀವ ನಗರದಲ್ಲಿ ಅಕ್ಮಲ್‌ನ ಭೀಕರ ಹತ್ಯೆಯಾಗಿತ್ತು. ಕೊಲೆಯಾಗಿರುವ ಅಕ್ಮಲ್ ಪತ್ನಿ ನಾಜೀಯಾ ನೀಡಿರುವ ದೂರಿನ ಮೇರೆಗೆ ಅಲ್ತಾಫ್ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕೆಎಂಡಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಅಲ್ತಾಫ್ ಖಾನ್‌ಗೆ ಕಳೆದ ಮಾರ್ಚ್ 6ರಂದು ಮೈಸೂರಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಶಾಂತಿನಗರ ಸುತ್ತಮುತ್ತ ಅಲ್ತಾಫ್ ಫ್ಲೆಕ್ಸ್ ಹಾಕಲಾಗಿತ್ತು. ಕೊಲೆಯಾದ ಅಕ್ಮಲ್, ಫ್ಲೆಕ್ಸ್ ತೆರವುಗೊಳಿಸುವಂತೆ ಮೈಸೂರು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಅಲ್ತಾಫ್, ಬಶೀರ್ ಮತ್ತಿತರರು ಸೇರಿ ಅಕ್ಮಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಇದು ಕೂಡ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಬಿ.ಕೆ.ಅಲ್ತಾಫ್ ಹಾಗೂ ಬಶೀರ್ ವಿರುದ್ಧ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಕ್ಮಲ್ ಹರಿಯಬಿಟ್ಟಿದ್ದ.
ಇದೇ ದ್ವೇಷಕ್ಕೆ ತನ್ನ ಪತಿಯನ್ನು ಕೊಲೆ ಮಾಡಿಸಿದ್ದಾರೆ ಎಂದು ಮೃತ ಅಕ್ಮಲ್ ಪತ್ನಿ ನಾಜೀಯಾ ದೂರು ನೀಡಿದ್ದಾರೆ. ನಾಜೀಯಾ ನೀಡಿದ ದೂರಿನನ್ವಯ ಬಶೀರ್ ಅಹಮ್ಮದ್, ಬಿ.ಕೆ. ಅಲ್ತಾಫ್ ಖಾನ್, ಪರ್ವಿಜ್, ಇಬ್ರಾಹಿಮ್, ಪೈಜನ್ ಅಹಮ್ಮದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸದ್ಯ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಮೈಸೂರಿನ ಉದಯಗಿರಿ ಪೋಲಿಸರು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಹಾಗೂ ಪ್ರಾಥಮಿಕ ಸಾಕ್ಷ್ಯಗಳನ್ನು ಕಲೆಹಾಕಿದ ನಂತರ ಆರೋಪಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.