ಮುಂಬೈ: ಭೂಗತ ಪಾತಕಿ ಚೋಟಾ ರಾಜನ್ ಸಹಚರ ರಾಮ್ನಾರಾಯಣ್ ಗುಪ್ತ ಎಂಬಾತನ ಮೇಲೆ 2006ರಲ್ಲಿ ಮುಂಬೈನಲ್ಲಿ ನಡೆದಿದ್ದ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರಿಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ರೇವತಿ ಮೋಹಿತೆ ಹಾಗೂ ಗೌರಿ ಗೋಡ್ಸೆ ಅವರಿದ್ದ ಹೈಕೋರ್ಟ್ ಪೀಠ 2013ರಲ್ಲಿ ಖುಲಾಸೆಗೊಳಿಸಿದ ಸಷೆನ್ಸ್ ಕೋರ್ಟ್ ತೀರ್ಪನ್ನು ಸಮರ್ಥನೀಯವಲ್ಲ ಎಂದು ರದ್ದುಗೊಳಿಸಿತು. ವಿಚಾರಣಾ ನ್ಯಾಯಾಲಯ ಶರ್ಮಾ ವಿರುದ್ಧ ಲಭ್ಯವಿದ್ದ ಸಾಕ್ಷ್ಯಾಧಾರವನ್ನು ಕಡೆಗಣಿಸಿದೆ. ಸಾಮಾನ್ಯ ಅಂಶವು ಕೂಡ ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥನೆಂದು ಸಾಬೀತುಪಡಿಸುತ್ತದೆ ಎಂದು ಹೈಕೋರ್ಟ್ ಹೇಳಿತು.
ಸಂಬಂಧಿಸಿದ ಸಷೆನ್ಸ್ ನ್ಯಾಯಾಲಯದ ಮುಂದೆ ಮೂರು ವಾರಗಳೊಳಗೆ ಶರಣಾಗಬೇಕೆಂದು ವಿಭಾಗೀಯ ಪೀಠ ಶರ್ಮಾಗೆ ನಿರ್ದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸೇರಿದಂತೆ 13 ಮಂದಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು. ಹಾಗೆಯೆ ಇತರ ಆರು ಮಂದಿಯ ಜೀವಾವಧಿ ಶಿಕ್ಷೆಯನ್ನು ಖುಲಾಸೆಗೊಳಿಸಿತು. ಹತ್ಯೆಯಲ್ಲಿ 13 ಪೊಲೀಸರು ಸೇರಿದಂತೆ 22 ಮಂದಿ ಭಾಗಿಯಾಗಿದ್ದರು.
ಪ್ರದೀಪ್ ಶರ್ಮಾ ವಿರುದ್ಧ ಸಾಕಷ್ಟು ಸಾಕ್ಯ್ಷಾಧಾರವಿಲ್ಲವೆಂದು 2013ರಲ್ಲಿ ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿ, ಇತರ 21 ಮಂದಿ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇಬ್ಬರು ಆರೋಪಿಗಳು ಕಸ್ಟಡಿಯಲ್ಲೆ ಮೃತಪಟ್ಟಿದ್ದರು. ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಅಲ್ಲದೆ ನಕಲಿ ಎನ್ಕೌಂಟರ್ನಲ್ಲಿ ಮೃತಪಟ್ಟ ರಾಮ್ ನಾರಾಯಣ್ ಗುಪ್ತ ಸಹೋದರ ಕೂಡ ಪ್ರದೀಪ್ ಶರ್ಮಾ ಖುಲಾಸೆಗೊಳಿಸಿರುವುದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
2006ರ ನವೆಂಬರ್ 11 ರಂದು ಗುಪ್ತ ಅಲಿಯಾಸ್ ಲಕನ್ ಬಯ್ಯ ಎಂಬಾತನನ್ನು ಚೋಟಾ ರಾಜನ್ ಗ್ಯಾಂಗ್ ಸಹಚರ ಎಂಬ ಸಂಶಯದ ಮೇಲೆ ಮುಂಬೈನ ಪ್ರದೇಶವೊಂದರಿಂದ ಕರೆದುಕೊಂಡು ಹೋಗಲಾಗಿತ್ತು. ಸಂಜೆಯ ವೇಳೆಗೆ ಈತನನ್ನು ನಕಲಿ ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಇದೇ ಕೇಸಿನಡಿ 25 ವರ್ಷಗಳ ಪೊಲೀಸ್ ಸೇವೆಯಲ್ಲಿ ಸುಮಾರು 112 ಮಂದಿಯನ್ನ ಎನ್ ಕೌಂಟರ್ ಮೂಲಕ ಕೊಂದ ಪ್ರದೀಪ್ ಶರ್ಮಾಗೆ ಇದೀಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.